ವಾಷಿಂಗ್ಟನ್: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಜಾನ್ ಲೂಯಿಸ್ ಅವರು ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ ಪರಂಪರೆಯನ್ನು ಉತ್ತೇಜಿಸಲು ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ಹೌಸ್ ಬಿಲ್ ಮಂಡಿಸಿದ್ದಾರೆ. ಇದಕ್ಕಾಗಿಯೇ ಮುಂದಿನ ಐದು ವರ್ಷಗಳವರೆಗೆ 150 ಮಿಲಿಯನ್ ಯುಎಸ್ ಡಾಲರ್ನ್ನು ಮೀಸಲಿಟ್ಟಿದ್ದಾರೆ.
ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯಂದು ಪರಿಚಯಿಸಲ್ಪಟ್ಟ ಹೌಸ್ ಬಿಲ್ (ಹೆಚ್‌ಆರ್ 5517) ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸ್ನೇಹವನ್ನು ವೃದ್ಧಿಸುತ್ತದೆ. ಮಹಾತ್ಮ ಗಾಂಧಿ ಮತ್ತು ಡಾ.ಮಾರ್ಟಿನ್ ಲೂಥರ್ ಕಿಂಗ್ ಅವರ ಪರಂಪರೆ ಮತ್ತು ಕೊಡುಗೆಗಳನ್ನು ಗೌರವಿಸುತ್ತದೆ.
ಗಾಂಧಿ-ಕಿಂಗ್ ಅಭಿವೃದ್ಧಿ ಪ್ರತಿಷ್ಠಾನ ಸ್ಥಾಪಿಸುವುದನ್ನು ಈ ಹೌಸ್ ಬಿಲ್ ಪ್ರಸ್ತಾಪಿಸಿದೆ. ಇದನ್ನು ಯುಎಸ್ಐಐಡಿ ಭಾರತೀಯ ಕಾನೂನುಗಳ ಅಡಿಯಲ್ಲಿ ರಚಿಸಲಾಗುವುದು. ಈ ಪ್ರತಿಷ್ಠಾನಕ್ಕಾಗಿ ಯುಎಸ್ಐಐಡಿಗೆ ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ 30 ಮಿಲಿಯನ್ ಯುಎಸ್ಡಿ ಬಜೆಟ್ನ್ನು ಮೀಸಲಿಡಲಾಗಿದೆ.
ಆರೋಗ್ಯ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳ ಅನುದಾನವನ್ನು ಮಸೂದೆ ಒಳಗೊಂಡಿದೆ. ಮುಂದಿನ ಐದು ವರ್ಷಗಳವರೆಗೆ (2025 ರ ವರೆಗೆ) 2 ಮಿಲಿಯನ್ ಯುಎಸ್ ಡಾಲರ್ ಹಂಚಿಕೆಯೊಂದಿಗೆ ಗಾಂಧಿ-ಕಿಂಗ್ ವಿಧ್ವಾಂಸ ವಿನಿಮಯ ಉಪಕ್ರಮವನ್ನು ಸ್ಥಾಪಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಮಸೂದೆಯನ್ನು ಸ್ವಾಗತಿಸಿದ ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ, ಭಾರತ ಮತ್ತು ಯುಎಸ್ ನಡುವಿನ ನಿಕಟ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಬಾಂಧವ್ಯವನ್ನು ಈ ಮಸೂದೆ ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.