ನ್ಯೂಯಾರ್ಕ್ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ತಂಡಗಳನ್ನು ಪರಿಚಯಿಸುತ್ತಿದ್ದಂತೆ ಯುಎಸ್ ವಿಶ್ವ ನಾಯಕತ್ವವನ್ನು ಪುನರುಚ್ಚರಿಸುವ ನೀತಿ ಪ್ರಕಟಿಸಿದ್ದಾರೆ.
ಈ ವೇಳೆ ಟ್ರಂಪ್ ಅವರ 'ಅಮೆರಿಕ ಫಸ್ಟ್' ಬ್ರಾಂಡ್ ಅನ್ನು ಬೈಡನ್ ಟೀಕಿಸಿದರು. ಇದು ಇರಾಕ್, ಲಿಬಿಯಾ ಮತ್ತು ಇತರೆಡೆಗಳಲ್ಲಿ ಮಿಲಿಟರಿ ಹಸ್ತಕ್ಷೇಪಗಳಿಗೆ ವಿರುದ್ಧವಾಗಿತ್ತು ಎಂದಿದ್ದಾರೆ. ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತೇನೆ.
ಅನಗತ್ಯವಾಗಿ ಮಿಲಿಟರಿ ಸಂಘರ್ಷಗಳಲ್ಲಿ ತೊಡಗದೆ ಅಮೆರಿಕವನ್ನು ನಿಜವಾಗಿಯೂ ಸುರಕ್ಷಿತವಾಗಿರಿಸಿಕೊಳ್ಳುತ್ತೇನೆ. ಮತ್ತು ಭಯೋತ್ಪಾದಕರನ್ನು ಮಟ್ಟಹಾಕಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿದೇಶಾಂಗ ನೀತಿಯ ಕುರಿತು ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪ್ರತಿಕ್ರಿಯಿಸಿ, ನಾವು ಸಮಾನತೆ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ನಾವು ಇತರರೊಂದಿಗೆ ಪಾಲುದಾರರಾಗಬೇಕು, ಮುಂದೆ ಬರುವ ಸವಾಲುಗಳನ್ನು ಎದುರಿಸಲು ಇತರೆ ದೇಶಗಳಿಗಿಂತ ಅಮೆರಿಕವು ಹೆಚ್ಚಿನ ಸಾಮರ್ಥ್ಯ ಹೊಂದಿದೆ.
ದೇಶದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ಆದ್ಯತೆ ನೀಡಬೇಕು. ಜೊತೆಗೆ ಮಧ್ಯಮ ವರ್ಗವನ್ನು ಬೆಳೆಸಲು ಮತ್ತು ಅಸಮಾನತೆ ಕಡಿಮೆ ಮಾಡಲು ವಿಶ್ವದಾದ್ಯಂತದ ಆರ್ಥಿಕ ಶಕ್ತಿಯನ್ನು ಒಂದುಗೂಡಿಸಬೇಕು ಎಂದು ಅವರು ಹೇಳಿದರು.
ಭಯೋತ್ಪಾದಕರ ನಿರಂತರ ಬೆದರಿಕೆಗಳನ್ನು ಎದುರಿಸುವಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಜ್ಯಾಕ್ ಸುಲ್ಲಿವಾನ್ ಇದೇ ವೇಳೆ ತಿಳಿಸಿದರು.