ಟ್ರಿಪೋಲಿ(ಲಿಬಿಯಾ) : ಕರ್ನಲ್ ಎಂದೇ ಹೆಸರುವಾಸಿಯಾಗಿದ್ದ ಲಿಬಿಯಾದ ಮಾಜಿ ಅಧ್ಯಕ್ಷ ಮುಅಮ್ಮರ್ ಗಡಾಫಿ ಪುತ್ರ ಅಲ್ ಸಾದಿ ಗಡಾಫಿಯನ್ನು ಏಳು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ದೇಶದ ಹಂಗಾಮಿ ಅಧ್ಯಕ್ಷ ಅಬ್ದುಲ್ ಹಮೀದ್ ಡಿಬೀಬಾ ಟ್ವೀಟ್ ಮಾಡಿದ್ದು, ನ್ಯಾಯಾಲಯದ ಹಿಂದಿನ ಆದೇಶಕ್ಕನುಸಾರವಾಗಿ ಅಬ್ದುಲ್ ಅಲ್-ಸಾದಿ ಗಡಾಫಿಯನ್ನು ರಿಲೀಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ ಸಾದಿ, ತನ್ನ ತಂದೆಯ ಆಡಳಿತದ ಸಮಯದಲ್ಲಿ ದಂಗೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ರಾಜಧಾನಿ ಟ್ರಿಪೋಲಿಯ ಜೈಲಿನಲ್ಲಿ ಬಂಧಿಯಾಗಿದ್ದ. ಸತತ ವಿಚಾರಣೆಗಳ ನಂತರವೂ ಆತನನ್ನು ಜೈಲಿನಲ್ಲಿಯೇ ಇರಿಸಲಾಗಿತ್ತು. ಗಡಾಫಿ ಆಳ್ವಿಕೆಯಲ್ಲಿದ್ದ ಅನೇಕ ಅಧಿಕಾರಿಗಳು ಇನ್ನೂ ಅದೇ ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಅಲ್ ಸಾದಿ ರಿಲೀಸ್ ಆದ ಬಳಿಕ ಟರ್ಕಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ಅಲ್ ಮರ್ಸಾದ್ ವರದಿ ಮಾಡಿದೆ.
ಸಮನ್ವಯ ಸಾಧಿಸದೇ ನಾವು ಮುಂದುವರಿಯಲು ಸಾಧ್ಯವಿಲ್ಲ, ಯುದ್ಧದಲ್ಲಿ ಮುಳುಗಿರುವ ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಚುನಾವಣೆ ನಡೆಸಲಾಗುವುದು ಎಂದು ಡಿಬೀಬಾ ಹೇಳಿದ್ದಾರೆ.
2011 ರ ದಂಗೆಯ ಸಮಯದಲ್ಲಿ, ಅಲ್-ಸಾದಿ ಗಡಾಫಿ ವಿಶೇಷ ಪಡೆಗಳನ್ನು ಮುನ್ನಡೆಸಿದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಬಂಡುಕೋರರ ಹತ್ಯೆಯಾಗಿತ್ತು. ಇದೇ ಸಮಯದಲ್ಲಿ ತಂದೆ ಮುಅಮ್ಮರ್ ಆಡಳಿತ ಮುರಿದುಬಿದ್ದಿತ್ತು. ಅಲ್ ಸಾದಿ ಹಾಗೂ ಆತನ ಸಹಚರರನ್ನು ನೈಜರ್ನಲ್ಲಿ ಉಳಿಸಿಕೊಳ್ಳಲು ಅಸಾಧ್ಯವಾದ್ದರಿಂದ ಅವರನ್ನು 2014 ರ ಮಾರ್ಚ್ನಲ್ಲಿ ಲಿಬಿಯಾಗೆ ಹಸ್ತಾಂತರಿಸಲಾಯಿತು ಎಂದು ಆಫ್ರಿಕಾ ಸರ್ಕಾರ ತಿಳಿಸಿದೆ.
ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿ ದಂಪತಿಗೆ ಎಂಟು ಜನ ಮಕ್ಕಳಿದ್ದು, ಅವರಲ್ಲಿ ಹೆಚ್ಚಿನವರು ಇವರ ಆಡಳಿತಕ್ಕೆ ಸಹಾಯ ಮಾಡಿದರು. ದಂಗೆಯ ಸಮಯದಲ್ಲಿ ಎಂಟು ಮಕ್ಕಳ ಪೈಕಿ ಮೂವರನ್ನು ಕೊಲ್ಲಲಾಗಿತ್ತು.
ತನ್ನ ತಂದೆಗೆ ಉತ್ತರಾಧಿಕಾರಿಯಾಗಿದ್ದ ಸೀಫ್ ಅಲ್-ಇಸ್ಲಾಮ್ 2017 ರಲ್ಲಿ ಬಂಧನದಿಂದ ಬಿಡುಗಡೆಯಾದಾಗಿನಿಂದ ಲಿಬಿಯಾದಲ್ಲಿದ್ದಾನೆ. ಮತ್ತೊಬ್ಬ ಮಗ ಹ್ಯಾನಿಬಲ್ ಅನ್ನು ಲೆಬನಾನ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಉಳಿದ ಮಕ್ಕಳು ನೆರೆಯ ಅಲ್ಜೀರಿಯಾದಲ್ಲಿ ಗಡಾಫಿಯ ಪತ್ನಿ ಸಫಿಯಾ ಆಶ್ರಯದಲ್ಲಿದ್ದಾರೆ. 2012 ರಲ್ಲಿ ತಾಯಿ ಮತ್ತು ಇಬ್ಬರು ಸಹೋದರರಿಗೆ ಒಮಾನ್‌ನಲ್ಲಿ ಆಶ್ರಯ ನೀಡಲಾಯಿತು. ಅವರು ಅಲ್ಲಿಂದ ಅಲ್ಜೀರಿಯಾದಿಂದ ತೆರಳಿದರು. ಮುಅಮ್ಮರ್ ಆಳ್ವಿಕೆಯಲ್ಲಿ ಅಲ್ ಸಾದಿ ವೈಭೋಗದ ಜೀವನ ನಡೆಸಿದ್ದರು. ಲಿಬಿಯಾದ ಸಾಕರ್ ಲೀಗ್ ಅನ್ನು ಅವರ ವೈಯಕ್ತಿಕ ಫೀಫಡಮ್ ಎಂದು ಪರಿಗಣಿಸಿದರು.
ಇದನ್ನೂ ಓದಿ: ಭಯೋತ್ಪಾದಕರಿಗೆ ಪಾಕ್ ಆಶ್ರಯ ನೀಡುತ್ತಿದೆ ಎಂದ ಖ್ಯಾತ ಲೇಖಕಿ: ಸಂದರ್ಶನವನ್ನೇ ಮೊಟಕುಗೊಳಿಸಿದ BBC!
ತೈಲ ಶ್ರೀಮಂತ ರಾಷ್ಟ್ರವೆಂದೇ ಹೆಸರುವಾಸಿಯಾಗಿರುವ ಲಿಬಿಯಾ 2011 ರ ದಂಗೆಯ ನಂತರ ಸರಿಯಾದ ಆಡಳಿತ ವ್ಯವಸ್ಥೆಯಿಲ್ಲದೇ ತತ್ತರಿಸಿಹೋಗಿದೆ. ಅಲ್ಲಿರುವ ಪ್ರತಿಯೊಂದೂ ಸಶಸ್ತ್ರ ಗುಂಪುಗಳನ್ನು ವಿದೇಶಿ ಸರ್ಕಾರಗಳು ಬೆಂಬಲಿಸುತ್ತಿವೆ.