ಚೆನ್ನೈ (ತಮಿಳುನಾಡು): ಶನಿವಾರ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಂ (78) ಅವರ ಅಂತ್ಯಕ್ರಿಯೆ ರವಿವಾರ ನೆರವೇರಿದೆ. ತಮಿಳುನಾಡಿನ ಚೆನ್ನೈನ ಬೆಸೆಂಟ್ ನಗರ್ ಚಿತ್ತಾಗಾರದಲ್ಲಿ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಮತ್ತು ಪೊಲೀಸ್ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ಇಂದು ಜರುಗಿದೆ. ಪೊಲೀಸರು ಗಾಳಿಯಲ್ಲಿ 30 ಸುತ್ತು ಗುಂಡು ಹಾರಿಸಿ ಅಂತಿಮ ಗೌರವಗಳನ್ನು ಸಲ್ಲಿಸಿದರು.
ಇದನ್ನೂ ಓದಿ: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ: ಗಣ್ಯರಿಂದ ಸಂತಾಪ
ಇಲ್ಲಿನ ನುಂಗಂಬಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಬೆಳಗ್ಗೆ ವಾಣಿ ಜಯರಾಂ ಶವವಾಗಿ ಪತ್ತೆಯಾಗಿದ್ದರು. ಹೀಗಾಗಿಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಓಮಂತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ನಂತರ ವಾಣಿ ಜಯರಾಂ ಅವರ ಪಾರ್ಥಿವ ಶರೀರ ಕುಟುಂಬಕ್ಕೆ ಹಸ್ತಾಂತರಿಸಿದ್ದರು.
ಬಳಿಕ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ವಾಣಿ ಜಯರಾಂ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು, ಚಿತ್ರರಂಗದ ಪ್ರಮುಖ ಸಂತಾಪ ಸೂಚಿಸಿದ್ದರು. ಅಲ್ಲದೇ, ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಅನೇಕರು ವಾಣಿ ಜಯರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದ್ದರು.
ಪದ್ಮಭೂಷಣ ಸ್ವೀಕರಿಸುವ ಮೊದಲೇ ಇಹಲೋಕ ತ್ಯಜಿಸಿದ ಹಿನ್ನೆಲೆ ಗಾಯಕಿ: ಕಳೆದ ಜನವರಿ 25ರಂದು ಕೇಂದ್ರ ಸರ್ಕಾರವು 106 ಗಣ್ಯರು ಮತ್ತು ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಲ್ಲಿ ಪ್ರಕಟಿಸಿತ್ತು. ಇದರಲ್ಲಿ ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ವಾಣಿ ಜಯರಾಂ ಅವರಿಗೂ ಪದ್ಮಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಆದರೆ, ಪದ್ಮಭೂಷಣ ಸ್ವೀಕರಿಸುವ ಮೊದಲೇ ವಾಣಿ ಜಯರಾಂ ಅವರು ಇಹಲೋಕ ತ್ಯಜಿಸಿ, ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಇಂದು ವಾಣಿ ಜಯರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಎಂಕೆ ಸ್ಟಾಲಿನ್, ವಾಣಿ ಜಯರಾಂ 19 ಭಾಷೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಆದರೆ, ಈ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲು ಅವರು ನಿಧನರಾಗಿದ್ದು ದುಃಖಕರ ಸಂಗತಿ ಹೇಳಿದ್ದರು.
ಅನುಮಾನಾಸ್ಪದ ಸಾವಲ್ಲ ಎಂದ ಪೊಲೀಸರು: ಮತ್ತೊಂದೆಡೆ, ಶನಿವಾರ ತಮ್ಮ ಮನೆಯಲ್ಲಿ ವಾಣಿ ಜಯರಾಂ ಅವರು ಶವವಾಗಿ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಕೈಗೊಂಡಿದ್ದರು. ಅಲ್ಲದೇ, ವಿಧಿವಿಜ್ಞಾನ ತಜ್ಞರು ಕೂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಇಲಾಖೆ ವರದಿ ಆಧರಿಸಿ ವಾಣಿ ಜಯರಾಂ ಅವರು ಸಾವು ಅನುಮಾನಾಸ್ಪದವಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: 'ಭಾವವೆಂಬ ಹೂವು ಅರಳಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಗಾಯಕಿ ವಾಣಿ ಜಯರಾಂ
ಇನ್ನು, 1971ರಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ್ದ ವಾಣಿ ಜಯರಾಂ ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದರು. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಭಾಷೆಗಳಲ್ಲಿ ಅನೇಕ ಹಾಡಿದ್ದರು. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಮತ್ತು ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಅವರು ಸ್ವೀಕರಿಸಿದ್ದರು.
ಇದನ್ನೂ ಓದಿ: ವಾಣಿ ಜಯರಾಂ ನಿಧನ: ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ ಪೊಲೀಸರು