ಸೆಪ್ಟೆಂಬರ್ 18...ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳ ಜನ್ಮದಿನ. ಸ್ಯಾಂಡಲ್ ವುಡ್ ಅಲ್ಲದೇ ಅಭಿಮಾನಿಗಳ ಪಾಲಿಗಿದು ವಿಶೇಷ ದಿನ. ನಮ್ಮನ್ನಗಲಿರುವ ಸಾಹಸ ಸಿಂಹ ವಿಷ್ಣುವರ್ಧನ್, ಕಬ್ಜ ಸೌಂಡ್ ಮಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟುಹಬ್ಬ.
ಈ ವಿಶೇಷ ದಿನವನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಶುಭಾಶಯಗಳ ಸಂದೇಶ ಹರಿದು ಬರುತ್ತಿದೆ. ವಿಶೇಷವಾಗಿ ಸಾಹಸಸಿಂಹನ ಸ್ಮರಣೆ ಆಗುತ್ತಿದೆ.
ಕೋಟಿಗೊಬ್ಬ ವಿಷ್ಣುವರ್ಧನ್ ಜನ್ಮದಿನ: ಕನ್ನಡ ಚಿತ್ರರಂಗದ ಹೃದಯವಂತ ವಿಷ್ಣುವರ್ಧನ್ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 72ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಅವರು ಇಹಲೋಕ ತ್ಯಜಿಸಿ 13 ವರ್ಷಗಳಾಗಿದ್ದು, ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಇಂದು ಅರ್ಥಪೂರ್ಣವಾಗಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ.
ಸೆಪ್ಟೆಂಬರ್ 18 ವಿಷ್ಣುವರ್ಧನ್ ಹುಟ್ಟಿದ ದಿನ, ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸಮಾಧಿ ಬಳಿ ಅವರ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್ಗಳು ರಾರಾಜಿಸುತ್ತಿವೆ. ಒಂದೇ ಜಾಗದಲ್ಲಿ 40 ಅಡಿಯ ಕಟೌಟ್ಗಳನ್ನು ಹಾಕುತ್ತಿರುವುದು ಇದೇ ಪ್ರಥಮ ಪ್ರಯತ್ನವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹುಟ್ಟು ಹಬ್ಬಕ್ಕೆ 50 ಕಟೌಟ್ಗಳನ್ನ ಹಾಕಿಸಿಕೊಳ್ಳುತ್ತಿರುವ ಮೊದಲ ನಟ ಎಂಬ ಹೆಗ್ಗಳಿಕೆಗೆ ದಿ. ಡಾ. ವಿಷ್ಣುವರ್ಧನ್ ಪಾತ್ರರಾಗಿದ್ದಾರೆ.
ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದರು. ಆದರೆ, 2009ರ ಡಿಸೆಂಬರ್ 30ರಂದು ತಮ್ಮ 59ನೇ ವಯಸ್ಸಿಗೆ ಕೊನೆಯುಸಿರೆಳೆದು ಕನ್ನಡಿಗರ ಕಣ್ಣೀರಿಗೆ ಕಾರಣರಾದರು.
ಸಿಂಹಾದ್ರಿಯ ಸಿಂಹ, ಹೃದಯವಂತ, ಕದಂಬ, ಈ ಬಂಧನ, ಆಪ್ತರಕ್ಷಕ, ಆಪ್ತಮಿತ್ರ, ಮಾತಾಡ್ ಮಾತಾಡ್ ಮಲ್ಲಿಗೆ, ಸಾಹುಕಾರ, ಕೋಟಿಗೊಬ್ಬ, ಯಜಮಾನ, ಸೂರ್ಯವಂಶ, ಪರ್ವ, ಚಿನ್ನದಂತ ಮಗ ಹೀಗೆ ಸುಮಾರು 220 ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ನಟ ಉಪೇಂದ್ರ ಜನ್ಮದಿನ: ಇನ್ನು ಬುದ್ಧಿವಂತ, ರಿಯಲ್ ಸ್ಟಾರ್, ನಿರ್ದೇಶಕ ಹಾಗೂ ನಟ ಉಪೇಂದ್ರ 54ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕೋವಿಡ್ ಹಿನ್ನೆಲೆ ಕೇವಲ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬುದ್ಧಿವಂತ ಈ ಬಾರಿ ವಿಶೇಷವಾಗಿ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನದ ಸಲುವಾಗಿಯೇ ಒಂದು ದಿನ ಮೊದಲೇ ಅಂದರೆ ನಿನ್ನೆ(ಶನಿವಾರ) ಕಬ್ಜ ಸಿನಿಮಾ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಲಾಗಿದೆ.
ಇನ್ನೂ ಉಪ್ಪಿ, ಸೂಪರ್, ಏ, ಉಪೇಂದ್ರ, ಸ್ವಸ್ತಿಕ್, ಪ್ರೀತ್ಸೆ, ಕುಟುಂಬ, ರಕ್ತ ಕಣ್ಣೀರು, ಉಪೇಂದ್ರ ಮತ್ತೆ ಬಾ, ಮುಕುಂದ ಮುರಾರಿ, ಬುದ್ಧಿವಂತ, ಮಸ್ತ್ ಮಜಾ ಮಾಡಿ, ನಾನು ನಾನೇ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಿಯಲ್ ಸ್ಟಾರ್, ಅಭಿನಯ ಚಕ್ರವರ್ತಿ ಅಭಿನಯದ ಕಬ್ಜ ಟೀಸರ್ ರಿಲೀಸ್...ಉಪ್ಪಿ ಮಾಸ್ ಲುಕ್ಗೆ ಫ್ಯಾನ್ಸ್ ಫಿದಾ
80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಕಬ್ಜ ಚಿತ್ರ ಅದ್ಧೂರಿ ಮೇಕಿಂಗ್ನೊಂದಿಗೆ ಗಮನ ಸೆಳೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿ 7 ಭಾಷೆಯಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಿನಿಮಾ ದಸರಾಗೆ ತೆರೆಕಾಣಲು ಸಿದ್ಧತೆ ನಡೆಯುತ್ತಿದೆ.
ಇನ್ನೂ ಅಭಿಮಾನಿಗಳ ದಿನದಂದು ಕೇಕ್ ಕಟಿಂಗ್, ಹಾರ, ಬೊಕ್ಕೆ ಗಿಫ್ಟ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಫೋಟೋಗೆ ಮಾತ್ರ ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ ಎಂದು ಟ್ವೀಟ್ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನ.. ಅಭಿಮಾನ್ ಸ್ಟುಡಿಯೋದಲ್ಲಿ ರಾರಾಜಿಸುತ್ತಿವೆ 40 ಅಡಿ ಎತ್ತರದ ಕಟೌಟ್
ನಟಿ ಶ್ರುತಿ ಹುಟ್ಟುಹಬ್ಬ: ಇನ್ನು ಅಳುಮುಂಜಿ ಪಾತ್ರಗಳಿಂದಲೇ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಶ್ರುತಿ ಕೂಡ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ, ಚಿತ್ರರಂಗದವರು ಹಾಗೂ ಅಭಿಮಾನಿಗಳು ಶ್ರುತಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ನೋಡಲು ಬಲು ಲಕ್ಷಣ, ಅಭಿನಯದಲ್ಲಿ ಎತ್ತಿದ ಕೈ. ಅವ್ವ, ಅಕ್ಕತಂಗಿ, ಕಲ್ಪನಾ, ಪುಟ್ಟಕ್ಕನ ಹೈವೇ, ಸಿರಿವಂತ, ಹೆಂಡತಿ ಕಟ್ಟಿದ ತಾಳಿ, ಗೌಡ್ರು, ಅಮ್ಮ ನಿನ್ನ ತೋಳಿನಲ್ಲಿ, ಭಾಮಾ ಸತ್ಯಭಾಮ, ಕೊಡಗಿನ ಕಾವೇರಿ, ಬಾಳಿನ ದಾರಿ, ಕರ್ಪೂರದ ಗೊಂಬೆ, ಮಿನಿಗು ತಾರೆ, ತಾಯಿ ಇಲ್ಲದ ತವರು, ಶುಭಲಗ್ನ, ಮಾಂಗಲ್ಯ ಸಾಕ್ಷಿ, ಹೆತ್ತ ಕರುಳು ಸೇರಿದಂತೆ ಈವರೆಗೆ 120 ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.