ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಬೈ ಎಲೆಕ್ಷನ್ ಪ್ರಚಾರ ಅಬ್ಬರ ಜೋರಾಗಿದೆ. ಇದು ಆಡಳಿತರೂಢ ಟಿಆರ್ಎಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಾಜಿದ್ದಿ ಎಂದೇ ಬಿಂಬಿತವಾಗುತ್ತಿದೆ. ಒಂದೆಡೆ ಕೇಂದ್ರ ಸರ್ಕಾರಕ್ಕೆ ಈ ಚುನಾವಣೆ ಮೂಲಕವೇ ಸಂದೇಶ ರವಾನೆ ಆಗಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಟಿಆರ್ಎಸ್ ಕಿತ್ತೊಗೆಯಲು ತೆಲಂಗಾಣ ಜನರು ಬಯಸಿದ್ದಾರೆ. ತೆಲಂಗಾಣ ಜನರ ಬೇಡಿಕೆಗಳು ಬಿಜೆಪಿಯಿಂದ ಮಾತ್ರ ಈಡೇರಲಿವೆ ಎಂದು ಪ್ರಚಾರ ನಡೆಸುತ್ತಿದ್ದಾರೆ.
ಇಂದು ಭಾರತೀಯ ಜನತಾ ಪಕ್ಷ ಆಯೋಜಿಸಿರುವ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ. ಮುನುಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಸಚಿವ ಅಮಿತ್ ಶಾ ಮಾತನಾಡಲಿದ್ದಾರೆ. ಮುನುಗೋಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಕ್ಷ ಸರ್ವ ಪ್ರಯತ್ನ ನಡೆಸಿದೆ.
ಸಭೆ ನಂತರ ಹೈದರಾಬಾದ್‌ನಲ್ಲಿ ನಟ ಜೂನಿಯರ್ ಎನ್‌ಟಿಆರ್ ಅವರನ್ನು ಅಮಿತ್ ಶಾ ಭೇಟಿಯಾಗಿ ಕೆಲ ಹೊತ್ತು ಚರ್ಚೆ ನಡೆಸಲಿದ್ದಾರೆ. ಮುನುಗೋಡು ಸಮಾವೇಶ ಮುಗಿಸಿ ವಾಪಸಾಗುವ ವೇಳೆ ಅಮಿತ್ ಶಾ ಅವರು ಶಂಶಾಬಾದ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ವಿಮಾನ ನಿಲ್ದಾಣದ ಬಳಿ ಇರುವ ಹೋಟೆಲ್‌ನಲ್ಲಿ ಸಂಜೆ ಎನ್‌ಟಿಆರ್ ಅವರೊಂದಿಗೆ ಆಮಿತ್ ಶಾ ಸಭೆ ನಡೆಸಲಿದ್ದಾರೆ.
ಅಮಿತ್ ಶಾ- ಜೂ. ಎನ್‌ಟಿಆರ್ ಭೇಟಿಯನ್ನು ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ. ಇಬ್ಬರೂ ಯಾವ ವಿಷಯಗಳ ಬಗ್ಗೆ ಮಾತನಾಡುತ್ತಾರೆ? ರಾಜಕೀಯ ಕಾರಣಗಳೇ ಅಥವಾ ಇತರೆ ಅಂಶಗಳೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರೇಜಿ ಸ್ಟಾರ್ ಪುತ್ರ: ಅಪ್ಪ ಅಮ್ಮನ ಆಸೆಯಂತೆ ನಡೆಯುತ್ತೇನೆಂದ ಮನೋರಂಜನ್
ತೆಲಂಗಾಣ ಜನತೆ ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ. ಮುನುಗೋಡು ಸಮಾವೇಶದಲ್ಲಿ ದೊಡ್ಡ ನಾಯಕರು ಭಾಗಿಯಾಗಲಿದ್ದಾರೆ. ಅಮಿತ್ ಶಾ ಮಾತು ಜನಮನಗಳಿಗೆ ತಲುಪಲಿದೆ. ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮಿತ್ ಶಾ- ಜೂನಿಯರ್ ಎನ್‌ಟಿಆರ್ ಭೇಟಿ ಬಗ್ಗೆ ಖಚಿತಪಡಿಸಿದ್ದಾರೆ.