ಚೆನ್ನೈ: ಕಾಲಿವುಡ್ನ ಖ್ಯಾತ ಹಾಸ್ಯನಟ ಮೈಲಸಾಮಿ ಹೃದಯಾಘಾತದಿಂದ ಇಂದು ನಿಧನರಾದರು. 57 ವರ್ಷದ ಹಾಸ್ಯನಟ ಚೆನ್ನೈನ ಸಾಲಿಗ್ರಾಮದಲ್ಲಿ ನೆಲೆಸಿದ್ದರು. ಮೈಲಸಾಮಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಸ್ಥಳೀಯ ಶಿವನ ದೇವಸ್ಥಾನಕ್ಕೆ ತೆರಳಿದ್ದರು. ವಾಪಸು ಬರುವಾಗ ಏಕಾಏಕಿ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಚೆನ್ನೈನ ಪೋರೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಸತತ ಚಿಕಿತ್ಸೆಯ ನಂತರವೂ ಫಲಕಾರಿಯಾಗದೆ ಮೈಲಸಾಮಿ ಕೊನೆಯುಸಿರೆಳೆದಿದ್ದಾರೆ. ಮೈಲಸಾಮಿ ಅವರ ಅಕಾಲಿಕ ಸಾವಿನ ಸುದ್ದಿ ಚಿತ್ರರಂಗ ಮಾತ್ರವಲ್ಲದೆ, ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ನಿನ್ನೆ ಸಂಜೆ ತೆಲುವು ನಟ ತಾರಕರತ್ನ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದರು.
ಹಾಸ್ಯನಟನ ಸಿನಿಪಯಣ: ಸತ್ಯಮಂಗಲದವರಾದ ವೈಲಸಾಮಿ ಅವರು 1984 ರಲ್ಲಿ ಭಾಗ್ಯರಾಜ್ ನಿರ್ದೇಶನದ 'ತವಣಿ ಕಣಪುಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಮೈಲಸಾಮಿಗೆ ಕಮಲ್ ಚಿತ್ರ ಹೆಸರು ತಂದುಕೊಟ್ಟಿತು. ಬಿನ್, ಪುದು, ಗಿಲ್ಲಿ ಸೇರಿದಂತೆ ನಾನಾ ಚಿತ್ರಗಳಲ್ಲಿ ನಟಿಸಿ ಖ್ಯಾತರಾದರು.
ತಮಿಳು ಚಿತ್ರರಂಗದ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿರುವ ಹಾಸ್ಯನಟ ಎಂಜಿಆರ್ ಅವರ ಕಟ್ಟಾಭಿಮಾನಿಯಾಗಿದ್ದರು. ಬೆಳ್ಳಿಪರದೆಯಲ್ಲದೇ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಮಾಡರೇಟರ್ ಮತ್ತು ಆ್ಯಂಕರ್ ಆಗಿಯೂ ಕೆಲಸ ಮಾಡಿದ್ದಾರೆ.
2021 ರ ವಿಧಾನಸಭಾ ಚುನಾವಣೆಯಲ್ಲಿ ವಿರುಗಂಬಾಕ್ಕಂ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೊರೊನಾ ಅವಧಿಯಲ್ಲಿ ಅನೇಕ ಹಿರಿಯ ಪೋಷಕ ನಟರಿಗೆ ನೆರವು ನೀಡಿದ್ದರು.
ತೆಲುಗು ನಟ ತಾರಕರತ್ನ ನಿಧನ: ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ) ನಡೆಸುತ್ತಿದ್ದ ಪಾದಯಾತ್ರೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿಧನ ಹೊಂದಿದರು. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದರು. ಇಂದು ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಳೆದ ಕೆಲ ದಿನಗಳ ಹಿಂದೆ ಟಿಡಿಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ತಾರಕರತ್ನ ಅವರಿಗೆ ಹೃದಯಾಘಾತ ಸಂಭವಿಸಿತ್ತು. ನಂತರ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ಚಿಕಿತ್ಸೆ ನೀಡಲಾಗಿದ್ದರೂ, ಅವರು ನಿನ್ನೆ ರಾತ್ರಿ ದೈವಾಧೀನರಾದರು.
ಟಾಲಿವುಡ್ ಚಿತ್ರರಂಗ ಸಂತಾಪ: ತಾರಕರತ್ನ ಅಕಾಲಿಕ ಮರಣದಿಂದ ತೆಲುಗು ಚಿತ್ರರಂಗದ ಪ್ರಮುಖರು ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ. ತಾರಕರತ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿ, 23 ದಿನಗಳ ಜೀವಣ್ಮರಣದೊಂದಿಗೆ ಹೋರಾಡಿ ತಾರಕರತ್ನ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವೆ ಎಂದಿದ್ದಾರೆ.
ಇದನ್ನೂ ಓದಿ: ಫಲಿಸದ ಚಿಕಿತ್ಸೆ.. ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿಧನ