ಹೈದರಾಬಾದ್ : ಟಾಲಿವುಡ್ ಚಿತ್ರರಂಗದ ಹಿರಿಯ ನಟ ಮನ್ನವ ಬಾಲಯ್ಯ(92) ತಮ್ಮ ಹುಟ್ಟುಹಬ್ಬದ ದಿನವೇ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಟ ತೆಲಂಗಾಣದ ಹೈದರಾಬಾದ್ನ ಯೂಸುಫ್ಗುಡದಲ್ಲಿರುವ ತಮ್ಮ ನಿವಾಸದಲ್ಲಿ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ. 1930ರ ಏಪ್ರಿಲ್ 9ರಂದು ಜನಿಸಿದ್ದ ಬಾಲಯ್ಯ, ಮಲ್ಲಿಶ್ವರಿ, ಅನ್ನಮಯ್ಯ ಸೇರಿದಂತೆ ಅನೇಕ ಸೂಪರ್ ಜಿಟ್ ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎಣಿಸಿಕೊಂಡಿದ್ದರು.
ಇವರ ನಿಧನಕ್ಕೆ ಚಿತ್ರರಂಗ ಮಾತ್ರವಲ್ಲದೇ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. 1930ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿದ್ದ ಬಾಲಯ್ಯ, 1952ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ ಮಾಡಿದ್ದರು. 1957ರವರೆಗೆ ಮದ್ರಾಸ್ ಮತ್ತು ಕಾಕಿನಾಡ ಪಾಲಿಟೆಕ್ನಿಕ್ ಕಾಲೇಜ್ಗಳಲ್ಲಿ ಉಪಸ್ಯಾಸಕಾಗಿ ಸೇವೆ ಸಲ್ಲಿಸಿದ್ದು, ಆರಂಭದಲ್ಲೇ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದರು.
1958ರಲ್ಲಿ ಎಂಟುಕು ಪೈ ಎಂಟು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಭಾಗ್ಯದೇವತೆ, ಕುಂಕುಮ ರೇಖಾ, ಭೂಕೈಲಾಸ್ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಯ್ಯ ನಿಧನಕ್ಕೆ ನಟ ನಂದಮೂರಿ ಬಾಲಕೃಷ್ಣ ಸಂತಾಪ ಸೂಚಿಸಿದ್ದು, ಅವರ ಜೊತೆಗಿನ ಒಡನಾಟ ಮೆಲುಕು ಹಾಕಿದ್ದಾರೆ.