ನಟಿ ರಶ್ಮಿಕಾ ಮಂದಣ್ಣರ ದೀಪ್ಫೇಕ್ ವಿಡಿಯೋ ವೈರಲ್ ವಿಚಾರವಾಗಿ ಭಾರತೀಯ ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದೆ. ವದಂತಿಯ ಗೆಳತಿ ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಸಹ ಪ್ರತಿಕ್ರಿಯೆ ನೀಡಿದ್ದರು. ಇಂತಹದ್ದು ಯಾರಿಗೂ ಆಗಬಾರದು, ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು. ಅಮಿತಾಭ್ ಬಚ್ಚನ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್, ಇಶಾನ್ ಖಟ್ಟರ್, ನಾಗ ಚೈತನ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದರು.
ಮನರಂಜನಾ ಉದ್ಯಮಕ್ಕೆ ಆಘಾತ ನೀಡಿರುವ ಆತಂಕಕಾರಿ ಡೀಪ್‌ಫೇಕ್ ವಿಡಿಯೋಗೆ ಪ್ರತಿಕ್ರಿಯಿಸುವ ವೇಳೆ ಕಾನೂನು ಕ್ರಮಕ್ಕೆ ತಾರೆಯರು ಕರೆ ನೀಡಿದ್ದಾರೆ. ವಿಜಯ್ ದೇವರಕೊಂಡ ಶೇರ್ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ರೀಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ''Agreed Completely'' (ಒಪ್ಪಿದೆ) ಎಂದಿದ್ದಾರೆ.
'ರಶ್ಮಿಕಾ ಮಂದಣ್ಣ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಸರ್ಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ' ಎಂಬ ಶೀರ್ಷಿಕೆಯ ಸುದ್ದಿಯೊಂದನ್ನು ವಿಜಯ್ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಭವಿಷ್ಯದ ರಕ್ಷಣೆಗೆ ಸೂಕ್ತ ಕ್ರಮ ಅಗತ್ಯ ಎಂಬುದನ್ನು ಒತ್ತಿ ಹೇಳಿದ್ದರು. ರಶ್ಮಿಕಾರ ಪರಿಸ್ಥಿತಿ ಯಾರಿಗೂ ಬರಬಾರದು, ಇಂತಹ ಕೃತ್ಯಗಳನ್ನು ತ್ವರಿತವಾಗಿ ಭೇದಿಸಲು ಮತ್ತು ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಸೂಕ್ತ ಕ್ರಮ ಜರುಗಬೇಕು ಎಂಬರ್ಥದಲ್ಲಿ ಬರೆದಿದ್ದರು. ರಶ್ಮಿಕಾ ಅವರು ವಿಜಯ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ತಮ್ಮ ಅಧಿಕೃತ ಖಾತೆಯಲ್ಲಿ ರೀಶೇರ್ ಮಾಡಿದ್ದಾರೆ. ಜೊತೆಗೆ, ಗೆಳೆಯನ ನಿಲುವಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ
ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಬೇಡಿಕೆ ಹೊಂದಿರುವ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿತ್ತು. ರಶ್ಮಿಕಾರನ್ನೇ ಹೋಲುವ ಯುವತಿ ಹಾಟ್ ಡ್ರೆಸ್ನಲ್ಲಿ ಲಿಫ್ಟ್ನೊಳಗೆ ಬರುವ ದೃಶ್ಯ ಅದಾಗಿತ್ತು. ಇದೊಂದು ದೀಪ್ಫೇಕ್ ವಿಡಿಯೋ. ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ರಶ್ಮಿಕಾ ಮಂದಣ್ಣ ಅಲ್ಲ, ಇದು ನಿಜಕ್ಕೂ ಡೀಪ್‌ಫೇಕ್ ಸೃಷ್ಟಿ ಎಂದು ಸ್ಪಷ್ಟಪಡಿಸಿದರು. ಅಮಿತಾಭ್ ಬಚ್ಚನ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ ಬಳಿಕ, ಘಟನೆ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿತು. ನಂತರ ಹಲವು ಗಣ್ಯರು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಸರ್ಕಾರ ಕೂಡ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಕಾಪಿರೈಟ್ಸ್ ಉಲ್ಲಂಘಿಸಿ ಎನ್‌ಜಿಒಗೆ ನಷ್ಟ ಆರೋಪ: ನಿರ್ದೇಶಕ ಜೇಕಬ್ ವರ್ಗೀಸ್ ವಿರುದ್ಧ ಎಫ್‌ಐಆರ್
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ್ದ ರಶ್ಮಿಕಾ ಮಂದಣ್ಣ, ನನಗೆ ನಿಜಕ್ಕೂ ನೋವಾಗಿದೆ. ಭಯ ಕೂಡ ಆಗಿದೆ. ಒಂದು ವೇಳೆ ವಿದ್ಯಾಭ್ಯಾಸದ ಸಂದರ್ಭ ಹೀಗಾಗಿದ್ದರೆ ಅದನ್ನು ಹೇಗೆ ಫೇಸ್ ಮಾಡುತ್ತಿದ್ದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನನ್ನಂತೆಯೇ ಈ ರೀತಿಯ ಘಟನೆಗೆ ತುತ್ತಾಗಿರುವ ಅನೇಕರಿಗೆ ನೋವಾಗಿರಬಹುದು. ಮತ್ತಷ್ಟು ಜನರು ಈ ಸಮಸ್ಯೆ ಎದುರಿಸುವ ಮುನ್ನ ಸೂಕ್ತ ಕ್ರಮದ ಅಗತ್ಯವಿದೆ ಎಂದಿದ್ದರು. ಬೆಂಬಲಕ್ಕೆ ನಿಂತ ಸರ್ವರಿಗೂ ಕೃತಜ್ಞತೆ ತಿಳಿಸಿದ್ದರು.