ಸಂದೇಶ ಸಾರುವಂತಹ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಬಹುಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಕನ್ನಡ ಚಿತ್ರರಂಗದ ಮೇಷ್ಟ್ರು ಎಂದೇ ಜನಪ್ರಿಯ. ಇದೀಗ ಇವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವಿಷಯವೊಂದಕ್ಕೆ ಚರ್ಚೆಗೀಡಾಗಿದೆ. ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮವೇ ಇದಕ್ಕೆ ಕಾರಣ.
ವೈರಲ್ ಆದ ಆಮಂತ್ರಣ ಪತ್ರಿಕೆಯಲ್ಲೇನಿದೆ? ಇದೇ ಜುಲೈ 16, ಭಾನುವಾರದಂಂದು ಬೆಂಗಳೂರಿನಲ್ಲಿ ಆರ್ಎಸ್ಎಸ್ನ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಂಕರಪುರ ಭಾಗ ಶ್ರೀ ಗುರುಪೂಜಾ ಉತ್ಸವ ಹಮ್ಮಿಕೊಂಡಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಜು. 16ರ ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ. ಈ ಅಂಶಗಳನ್ನೊಳಗೊಂಡ ಆಮಂತ್ರಣ ಪತ್ರಿಕೆಯಲ್ಲಿ ಅಧ್ಯಕ್ಷರ ಹೆಸರಿರುವ ಜಾಗದಲ್ಲಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ಸಿನಿಮಾ ನಿರ್ದೇಶಕರು ಹಾಗೂ ಬರಹಗಾರರು ಎಂದು ಬರೆಯಲಾಗಿದೆ. ವಕ್ತಾರರ ಜಾಗದದಲ್ಲಿ ಶ್ರೀ ಗುರುರಾಜ್, ಅಖಿಲ ಭಾರತ ಸಂಯೋಜಕರು, ಗ್ರಾಮ ವಿಕಾಸ ಎಂದು ಬರೆದಿದೆ.
ಪರ - ವಿರೋಧ ಚರ್ಚೆ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘದಿಂದ ನಡೆಯುತ್ತಿರುವ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ, ಅಧ್ಯಕ್ಷತೆ ವಹಿಸಲಿದ್ದಾರೆ ಎಂಬ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಹೀಗಾಗಿ ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಆಲಿಯಾ, ರಣ್ವೀರ್ ಲುಕ್ ಇಷ್ಟವಾಯ್ತಾ?
ನಾಗತಿಹಳ್ಳಿ ಚಂದ್ರಶೇಖರ್ ಫೇಸ್ಬುಕ್ ಪೋಸ್ಟ್: ''ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ. ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು 'ಆಕಸ್ಮಿಕ' ಎಂದು ಅವರು ಕ್ಷಮೆಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ.
ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ, ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ. ತಪ್ಪು ತಿಳಿಯಲು, ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ, ಮಾಡೋಣ. ಇನ್ನು ಮಾತು ಸಾಕು''.
ಇದನ್ನೂ ಓದಿ: TAALI: 'ಚಪ್ಪಾಳೆ ಹೊಡೆಯಲ್ಲ, ಹೊಡೆಸಿಕೊಳ್ಳುತ್ತೇವೆ': ತೃತೀಯಲಿಂಗಿ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್