ತೆಲುಗು ಚಿತ್ರರಂಗದ ನಟ ನ್ಯಾಚುರಲ್ ಸ್ಟಾರ್ ನಾನಿ. 'ದಸರಾ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆದ ಬಳಿಕ ಅವರು ನಟಿಸುತ್ತಿರುವ ಚಿತ್ರ 'ಹಾಯ್ ನಾನ್ನ'. ಭಾರಿ ನಿರೀಕ್ಷೆಯ ನಡುವೆ ಈ ಸಿನಿಮಾ ಥಿಯೇಟರ್ಗೆ ಬರಲಿದೆ. ಈ ಮಧ್ಯೆ ಬಿಡುಗಡೆಯಾದ ಟೀಸರ್ ಹಾಗೂ ಹಾಡುಗಳು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ನಿನ್ನೆಯಷ್ಟೇ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಾಂಗ್ ಲಾಂಚ್ ಈವೆಂಟ್ನಲ್ಲಿ ನಟ ನಾನಿ ಅಭಿಮಾನಿಗಳ ಕೆಲವು ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಿದರು.
ದೊಡ್ಡ (ಸ್ಟಾರ್) ನಿರ್ದೇಶಕರ ಜೊತೆ ನೀವು ಯಾಕೆ ಸಿನಿಮಾ ಮಾಡಲ್ಲ? ಎಂದು ಅಭಿಮಾನಿಯೊಬ್ಬರು ನಾನಿಗೆ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ತಮ್ಮದೇ ಸ್ಟೈಲ್ನಲ್ಲಿ ಉತ್ತರಿಸಿದ ನಾನಿ, "ನೀವು ಇಚ್ಛಿಸಿದರೆ, ಇನ್ನೂ ದೊಡ್ಡ ನಟರ ಸಿನಿಮಾಗಳಿಗಾಗಿ ಕಾಯಬಹುದು. ನನಗಾಗಿ ಯಾಕೆ ಥಿಯೇಟರ್ಗೆ ಬರುತ್ತೀರಿ? ನಾನು ಕೂಡ ನನಗಿಷ್ಟವಾದ ಸಿನಿಮಾಗಳನ್ನು ಮಾಡುತ್ತೇನೆ. ನೀವು ಕೂಡ ನಿಮಗಿಷ್ಟವಾದ ಚಲನಚಿತ್ರಗಳನ್ನು ನೋಡುತ್ತೀರಿ. ಅಷ್ಟೇ" ಎಂದು ಹೇಳಿದರು.
'ಹಾಯ್ ನಾನ್ನ' ಸಿನಿಮಾದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರತಂಡ ಪ್ರಮೋಷನ್ನಲ್ಲಿ ಕಸರತ್ತು ನಡೆಸುತ್ತಿದೆ. ಅದರಲ್ಲೂ ಮ್ಯೂಸಿಕಲ್ ಪ್ರಚಾರ ಚೆನ್ನಾಗಿ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆಯಷ್ಟೇ ಮೂರನೇ ರೊಮ್ಯಾಂಟಿಕ್ ಮೆಲೋಡಿಯಸ್ ಹಾಡು ಕೂಡ ಬಿಡುಗಡೆಯಾಗಿದೆ. ಇಡೀ ಹಾಡು ನಾನಿ ಮತ್ತು ಮೃಣಾಲ್ ನಡುವಿನ ಮಧುರ ದೃಶ್ಯಗಳನ್ನು ಒಳಗೊಂಡಿದೆ. ಕೃಷ್ಣಕಾಂತ್ ನೀಡಿರುವ ಸಾಹಿತ್ಯ ಆಕರ್ಷಕ ಮತ್ತು ಅರ್ಥಪೂರ್ಣವಾಗಿದೆ. ಕಾಲ ಭೈರವ ಮತ್ತು ಶಕ್ತಿಶ್ರೀ ಗೋಪಾಲನ್ ಅವರ ಗಾಯನ ಭಾವಪೂರ್ಣವಾಗಿದೆ. ಹಸನ್ ಅಬ್ದುಲ್ ವಹಾಬ್ ಸಂಯೋಜಿಸಿದ ಸಂಗೀತವೂ ತುಂಬಾ ಮಧುರವಾಗಿದೆ.
ಇದನ್ನೂ ಓದಿ: 'Hi Nanna': ನಾನಿಯ 'ಹಾಯ್ ನಾನ್ನ'ಗೆ ಮೃಣಾಲ್ ಠಾಕೂರ್ ನಾಯಕಿ: ಅಪ್ಪ-ಮಗಳ ಬಾಂಧವ್ಯದ ಕಥೆಯಿದು..
ಚಿತ್ರತಂಡ: 'ಹಾಯ್ ನಾನ್ನ' ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ. ವೈರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಮತ್ತೊಂದೆಡೆ, ಚಿತ್ರದಲ್ಲಿ 'ಸಲಾರ್' ಬ್ಯೂಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿನ ಹೆಚ್ಚಿನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಪಂಚಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಜನರಿಗೆ ತಲುಪುವ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ 'ಹಾಯ್ ನಾನ್ನ' ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ವಿವೇಕ್ ಆತ್ರೇಯ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮುಂದಿನ ಸಿನಿಮಾ ಘೋಷಣೆ