ಗಾಳಿಪಟ 2 ಚಿತ್ರದಲ್ಲಿ ಅನಂತ್ ನಾಗ್, ಗಣೇಶ್, ದಿಗಂತ್, ರಂಗಾಯಣ ರಘು ಅವರಂತಹ ಪ್ರತಿಭಾವಂತ ಕಲಾವಿದರ ನಡುವೆ ಗಮನ ಸೆಳೆಯುವ ಮತ್ತೊಬ್ಬ ತಾರೆ ಅಂದ್ರೆ ಅದು ವೈಭವಿ ಶಾಂಡಿಲ್ಯ. ಗಣೇಶ್ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಮೂಲತಃ ಮರಾಠಿಯವರು. ಈಗಾಗಲೇ ಕೆಲವು ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕೆಲವು ವರ್ಷಗಳ ಹಿಂದೆ 'ರಾಜ್-ವಿಷ್ಣು' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ 'G-2' ಚಿತ್ರದ ಮೂಲಕ ವಾಪಸಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿನಯ ಚೆಲುವಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.
ಗಾಳಿಪಟ 2ರ ಶ್ವೇತಾ ಪಾತ್ರ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದದ್ದು ಎನ್ನುವ ವೈಭವಿ, 'ನಾನು ನಿಜ ಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಎಮೋಷನಲ್ ಆಗಿರುವೆ. ಹಾಗಾಗಿ, ಶ್ವೇತಾ ಪಾತ್ರ ಬಹಳ ಕಷ್ಟವಾಯಿತು. ಇಡೀ ಚಿತ್ರತಂಡದ ಸಹಾಯದೊಂದಿಗೆ ಪಾತ್ರ ನಿರ್ವಹಿಸಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ನಟಿಸಿದ್ದು ಫಲ ನೀಡಿತು. ಜನರ ಪ್ರೀತಿ ನೋಡಿದಾಗ ಬಹಳ ಖುಷಿ ಆಗುತ್ತದೆ' ಎಂದರು.
'ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅಭಿನಯವನ್ನು ಜನ ಗುರುತಿಸಿ ಮಾತನಾಡುವಾಗ ಹೃದಯ ತುಂಬಿ ಬರುತ್ತದೆ. ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ಗಾಳಿಪಟ 2 ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದರು. ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ ನನ್ನನ್ನು ಗಾಳಿಪಟ 2 ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯುವಂತಿಲ್ಲ' ಎಂದು ತಮ್ಮ ಕನ್ನಡ ಸಿನಿ ಜರ್ನಿಯ ಒಂದೊಂದೇ ಮೆಟ್ಟಿಲುಗಳ ಪರಿಚಯ ಮಾಡಿಕೊಟ್ಟರು.
ಇದೀಗ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ವೈಭವಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 'ಮಾರ್ಟಿನ್' ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅದು ಇನ್ನೊಂದು ಅದ್ಭುತವಾದ ಅನುಭವ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾಗಿದೆ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿದ್ದೇನೆ’ ಎಂದು ವಿವರಿಸಿದರು.
ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕಿಷ್ಟ ಎನ್ನುವ ತಾರೆ, 'ಯಾವುದೋ ಒಂದು ತರಹದ ಪಾತ್ರಕ್ಕೆ ನನಗೆ ಸೀಮಿತವಾಗುವುದಕ್ಕೆ ಇಷ್ಟವಿಲ್ಲ. ನನಗೆ ಡ್ರಗ್ ಅಡಿಕ್ಟ್ ಆಗಿ ನಟಿಸುವಾಸೆ. ಹಾರರ್ ಚಿತ್ರದಲ್ಲಿ ನಟಿಸುವಾಸೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವಾಸೆ. ಸೂಕ್ಷ್ಮಸಂವೇದನೆಯ ಚಿತ್ರಗಳ ಜೊತೆಗೆ ರಾಜಮೌಳಿ ಅವರ ಶೈಲಿಯ ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳಲ್ಲಿ ನಟಿಸುವುದಕ್ಕೆ ಆಸೆ ಇದೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ತಮ್ಮ ಮಹದಾಸೆ ಹಂಚಿಕೊಂಡರು.
ಸದ್ಯಕ್ಕೆ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕದ ವೈಭವಿಗೆ ಹಲವು ಆಫರ್ಗಳು ಮಾತ್ರ ಬರುತ್ತಲೇ ಇವೆಯಂತೆ. ಹಲವು ಕಥೆಗಳನ್ನು ಕೇಳಿರುವ ಅವರು ಯಾವುದನ್ನೂ ಓಕೆ ಮಾಡಿಲ್ಲ. ಎಂತಹ ಪಾತ್ರಗಳನ್ನು ಬೇಕಾದರೂ ಮಾಡಬಲ್ಲೆ ಎಂದು ತೋರಿಸಬೇಕು. ನಾನೊಬ್ಬ ವರ್ಸಟೈಲ್ ನಟಿ ಎಂದು ನಿರೂಪಿಸಬೇಕು. ಹಾಗಾಗಿ, ಅಂತಹ ಪಾತ್ರಗಳ ಆಯ್ಕೆ ಮತ್ತು ಹುಡುಕಾಟದಲ್ಲಿದ್ದೇನೆ. ಸದ್ಯದಲ್ಲೇ ಒಂದೊಳ್ಳೆಯ ಸುದ್ದಿ ಕೊಡುತ್ತೇನೆ’ ಎನ್ನುತ್ತಾ ಮಾತು ಮುಗಿಸಿದರು ವೈಭವಿ.
ಇದನ್ನೂ ಓದಿ: ಸೋನಾಲಿ ಫೋಗಟ್ ಆತ್ಮಹತ್ಯೆ ಕೇಸ್: ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ ಗೋವಾ ಮುಖ್ಯಮಂತ್ರಿ