ಹರಿದ್ವಾರ: ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರಾಖಂಡ್ ಪ್ರವಾಸದಲ್ಲಿದ್ದಾರೆ. ಇಂದು ಕಂಗನಾ ರಣಾವತ್ ಹರಿದ್ವಾರದ ದಕ್ಷಿಣ ಕಾಳಿ ಪೀಠದ ಬಳಿ ಇರುವ ನಮಾಮಿ ಗಂಗೆ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗಂಗಾರತಿ ನಂತರ ಕಂಗನಾ ಸಂತರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಖಾನ್‌ಪುರ ಶಾಸಕ ಉಮೇಶ್ ಕುಮಾರ್ ಕೂಡ ಜೊತೆಗಿರುತ್ತಾರೆ. ನಾಳೆ ಅವರು ಕೇದಾರನಾಥಕ್ಕೆ ಭೇಟಿ ಕೊಡಲಿದ್ದಾರೆ.
ಇಂದು ಸಂಜೆ ಕಂಗನಾ ರಣಾವತ್ ಗಂಗಾ ಆರತಿ ಮಾಡಲಿದ್ದಾರೆ ಎಂದು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ತಿಳಿಸಿದ್ದಾರೆ. ಈ ವೇಳೆ ಅನೇಕ ಸಂತರು ಮತ್ತು ಇತರೆ ಜನರು ಇರುತ್ತಾರೆ. ಈ ಕಾರ್ಯಕ್ರಮದ ಸಿದ್ಧತೆಗಳು ಬಹಳ ಸಮಯದಿಂದ ನಡೆಯುತ್ತಿದ್ದವು. ಆದರೆ ಕೆಲ ಕಾರಣಗಳಿಂದ ಈ ಕಾರ್ಯಕ್ರಮವು ಸಾಧ್ಯವಾಗಲಿಲ್ಲ.
ಈ ಕಾರ್ಯಕ್ರಮದ ಜೊತೆ ಜೊತೆಗೆ ಕಂಗನಾ ರಣಾವತ್ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನೂ ಹೊಂದಿದ್ದಾರೆ. ಕಂಗನಾ ರಣಾವತ್ ನಾಳೆ ಕೇದಾರನಾಥ ಧಾಮಕ್ಕೆ ತೆರಳಿ ಬಾಬಾ ಕೇದಾರನಿಗೆ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕೇದಾರನಾಥದಲ್ಲಿ ಭಕ್ತರ ದಂಡೇ ನೆರೆದಿದೆ. ಜೊತೆಗೆ, ಹವಾಮಾನವೂ ಹದಗೆಡುತ್ತಿದೆ. ಇದರಿಂದಾಗಿ ಪೊಲೀಸರು ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಹವಾಮಾನ ವೈಪರೀತ್ಯವಿದ್ದರೂ ಭಕ್ತರ ಉತ್ಸಾಹದಲ್ಲಿ ಕಡಿಮೆಯಾಗಿಲ್ಲ.
ಇದನ್ನೂ ಓದಿ: 'ಕಾಂತಾರ ರಾಣಿ' ಧರಿಸಿದ್ದು 32 ವರ್ಷದ ಹಳೆಯ ಸೀರೆ: ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಅಂದ ಚೆಂದದ ಫೋಟೋ
ಕಂಗನಾ ರಣಾವತ್ ಸಿನಿಮಾ ಜೊತೆಗೆ ತಮ್ಮ ಬೋಲ್ಡ್ ಹೇಳಿಕೆಗಳಿಂದಲೂ ಜನಪ್ರಿಯರು. ಸಿನಿಮಾದಲ್ಲಿನ ನಟನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಅಮೋಘ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದಾಗ್ಯೂ ಇವರ ಹೇಳಿಕೆಗಳು ಮಿಶ್ರ ಪ್ರತಿಕ್ರಿಯೆ ಗಳಿಸುತ್ತವೆ.
ಇದನ್ನೂ ಓದಿ: 'ಐಶ್ವರ್ಯಾ ರೈಗೆ ಸಿನಿಮಾಗಳಲ್ಲಿ ನಟಿಸಲು ಬಿಡಿ': ಅಭಿಮಾನಿ ಮಾತಿಗೆ ಅಭಿಷೇಕ್ ಉತ್ತರ ಹೀಗಿತ್ತು
ಇನ್ನು ಧಾರ್ಮಿಕ ಆಚರಣೆ ವಿಚಾರವಾಗಿಯೂ ಗಮನ ಸೆಳೆಯುವುದುಂಟು. ಹೆಚ್ಚಾಗಿ ಧಾರ್ಮಿಕ ಸ್ಥಳ, ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಅದರಂತೆ ಇಂದು ಸಂಜೆ ಸಹ ಹರಿದ್ವಾರದ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೆ ಬೇಕಾದ ಭದ್ರತೆ, ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.