ನಟ ಶಿವ ರಾಜ್ಕುಮಾರ್ ಅಭಿನಯದ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಘೋಸ್ಟ್'. ಶ್ರೀನಿ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಅಕ್ಟೋಬರ್ 19ರಂದು ತೆರೆ ಕಾಣಲಿದೆ. ಚಿತ್ರತಂಡ ಮೊದಲ ಫ್ಯಾನ್ಸ್ ಶೋ ಆಯೋಜಿಸಿದೆ.
ಬೆಂಗಳೂರಿನ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಅಕ್ಟೋಬರ್ 18ರ ಮಧ್ಯರಾತ್ರಿ 12ಕ್ಕೆ 'ಘೋಸ್ಟ್' ಮೊದಲ ಪ್ರದರ್ಶನ ಕಾಣಲಿದೆ. ಈ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗಾಗಿಯೇ ಆಯೋಜಿಸಲಾಗಿರುವ ಅದ್ಧೂರಿ ಫಸ್ಟ್ ಶೋ ಇದು. ಈ ಹಿಂದೆ, ಶಿವಣ್ಣನ ಅಭಿನಯದ 'ಭಜರಂಗಿ' ಮೊದಲ ಪ್ರದರ್ಶನ ಬೆಳಗ್ಗೆ 6ರಿಂದ ಆರಂಭವಾಗಿತ್ತು. ಆದರೆ, ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣಲಿರುವ ಮೊದಲ ಚಿತ್ರ 'ಘೋಸ್ಟ್' ಆಗಿರಲಿದೆ.
'GHOST'ಗಾಗಿ ಕಾಯುತ್ತಿರುವ ವಿದೇಶಿಗರು: 'ಘೋಸ್ಟ್' ನೋಡಲು ಭಾರತೀಯರಷ್ಟೇ ಅಲ್ಲ, ವಿದೇಶಿಗರು ಕುಡಾ ಕಾತುರದಿಂದ ಕಾಯುತ್ತಿದ್ದಾರೆ. ಲಂಡನ್ನಿಂದ ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಯಶಸ್ಸಿಗೆ ಹಾರೈಸಿದ್ದಾರೆ. ಫ್ಯಾನ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ಟೀಸರ್, ಟ್ರೇಲರ್ನಿಂದ ಕ್ರೇಜ್ ಹುಟ್ಟಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿ ಲೆಕ್ಕಾಚಾರದಲ್ಲಿ ವ್ಯವಹಾರ ನಡೆಸಿದೆ ಎಂದು ಮೂಲಗಳು ಹೇಳುತ್ತಿವೆ. ಹಿಂದಿ ಸ್ಯಾಟ್ಲೈಟ್ ಹಾಗೂ ಡಿಜಿಟಲ್ ಮತ್ತು ಡಬ್ಬಿಂಗ್ ರೈಟ್ಸ್ 15 ಕೋಟಿ ರೂಪಾಯಿಗೆ ಮಾರಾಟವಾಗಿದೆಯಂತೆ. 'ಘೋಸ್ಟ್' ಪ್ರಚಾರದ ಸಲುವಾಗಿ ಶಿವಣ್ಣ ಮುಂಬೈ, ದೆಹಲಿ ಮುಂತಾದೆಡೆ ತೆರಳುತ್ತಿದ್ದಾರೆ.
ಟ್ರೇಲರ್ ಹೀಗಿದೆ..: 'ಘೋಸ್ಟ್' ಟ್ರೇಲರ್ ಅಕ್ಟೋಬರ್ 1ರಂದು ಬಿಡುಗಡೆಯಾಗಿತ್ತು. ಆ್ಯಕ್ಷನ್ ದೃಶ್ಯಗಳು, ಖಡಕ್ ಡೈಲಾಗ್ಗಳಿಂದ ತುಂಬಿರುವ ಟ್ರೇಲರ್ ಸದ್ದು ಮಾಡುತ್ತಿದೆ. ಒಜಿ ಲುಕ್ ಹಾಗು ಚಿರ ಯುವಕನಂತೆ ಕಾಣುವ ಶಿವಣ್ಣನ ದೃಶ್ಯಗಳು ಹೈಲೈಟ್. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಪ್ರಮುಖ ಆಕರ್ಷಣೆ. ಡೈಲಾಗ್ಗಳು ಪಂಚಿಂಗ್ ಆಗಿವೆ. ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ. ಶಿವಣ್ಣ ಹಳೆಯ ಸಿನಿಮಾಗಳ ಲುಕ್‌ನಲ್ಲೂ ಕಾಣಿಸಿಕೊಂಡಿರುವುದು ವಿಶೇಷ. ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ಮಾಲಿವುಡ್ ನಟ ಜಯರಾಮ್ ಅವರನ್ನೂ ಕೂಡ ಟ್ರೇಲರ್ನಲ್ಲಿ ತೋರಿಸಲಾಗಿದೆ.
ಚಿತ್ರತಂಡ: ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಐದು ಸಾಹಸ ಸನ್ನಿವೇಶಗಳಿವೆ. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನಾ ಜೋಯಿಸ್ ಮುಂತಾದವರು ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾಗೆ ಸಂದೇಶ್ ಎನ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಸರ್ಪ್ರೈಸ್! 'ಘೋಸ್ಟ್' ಕುರಿತು ವಿಡಿಯೋ ಕಾಲ್ನಲ್ಲಿ ಅನುಪಮ್ ಖೇರ್- ಶಿವಣ್ಣ ಮಾತುಕತೆ