ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ರಿಷಭ್ ಪಂತ್ ಅವರು ಡಿಸೆಂಬರ್ 30ರ ಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ ಒಳಗಾದರು. ಈ ಅಪಘಾತದಲ್ಲಿ ಕ್ರಿಕೆಟಿಗ ತೀವ್ರವಾಗಿ ಗಾಯಗೊಂಡಿದ್ದಾರೆ. ರಿಷಭ್ ಅವರ ಮರ್ಸಿಡಿಸ್ ಕಾರು ಸುಟ್ಟು ಕರಕಲಾಗಿದೆ. ಅವರನ್ನು ಬಸ್ ಚಾಲಕ ಮತ್ತು ಕಂಡಕ್ಟರ್ ರಕ್ಷಿಸಿದ್ದಾರೆ. ಈ ಬಗ್ಗೆ ಇಡೀ ದೇಶವೇ ಇವರಿಬ್ಬರ ಶೌರ್ಯವನ್ನು ಮೆಚ್ಚಿ ಕೊಂಡಾಡುತ್ತಿದೆ. ಕ್ರಿಕೆಟಿಗನ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಬಾಲಿವುಡ್ ನಟರಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಇಂದು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಹೋಗಿ ರಿಷಭ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ ರಿಷಭ್ ಗಮನ ಬೇರೆಡೆಗೆ ಸೆಳೆಯಲು ಮನೋರಂಜನೆ ಸಹ ನೀಡಿದ್ದಾರೆ.
ರಿಷಭ್ ಧೈರ್ಯದಲ್ಲಿದ್ದಾರೆ: ರಿಷಭ್ ಪಂತ್ ಅವರೊಂದಿಗೆ ಮಾತನಾಡಿಕೊಂಡು ಬಂದ ಹಿರಿಯ ನಟರು ಕ್ರಿಕೆಟಿಗನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಿಷಭ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದ ತಕ್ಷಣ ನಾವು ಅವರನ್ನು ನೋಡಲು ಇಲ್ಲಿಗೆ ಬಂದಿದ್ದೇವೆ. ಅವರು ಹೆಚ್ಚಿನ ಉತ್ಸಾಹದಲ್ಲಿದ್ದಾರೆ, ಧೈರ್ಯದಲ್ಲಿದ್ದಾರೆ. ನಮಗಿದ್ದ ಚಿಂತೆ, ಆತಂಕ ಈಗ ಇಲ್ಲ. ಅವರ ತಾಯಿಯನ್ನು ಸಹ ಭೇಟಿಯಾದೆವು. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇಡೀ ದೇಶದ ಪ್ರಾರ್ಥನೆ ನಮ್ಮ ಸ್ಟಾರ್ ಆಟಗಾರನ ಮೇಲಿದೆ. ಅವರು ಬೇಗ ಗುಣಮುಖರಾಗುತ್ತಾರೆ. ಅವನೊಬ್ಬ ಹೋರಾಟಗಾರ ಎಂದು ಇಬ್ಬರೂ ನಟರು ತಿಳಿಸಿದರು.
ಮನರಂಜನೆ ನೀಡಿದ ನಟರು: 'ನಾವು ಅವರನ್ನು ಸ್ವಲ್ಪ ನಗುವಂತೆ ಮಾಡಿದೆವು, ನಾವು ಸ್ನೇಹಿತರಾಗಿ ಅವರ ಸ್ಥಿತಿಯನ್ನು ವಿಚಾರಿಸಲು ಬಂದಿದ್ದೇವೆಯೇ ಹೊರತು ಬಾಲಿವುಡ್ ಸ್ಟಾರ್‌ಗಳಾಗಿ ಅಲ್ಲ. ಇಂತಹ ಸಮಯದಲ್ಲಿ ನಾವು ಭೇಟಿಯಾಗಲು ಹೋಗಬೇಕು ಎಂದು ನನಗೆ ಅನಿಸುತ್ತದೆ. ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರವೇ ನಾವು ಅವರನ್ನು ಭೇಟಿಯಾದೆವು. ಅವರ ಗಮನ ಸೆಳೆಯಲು ಕೊಂಚ ಮನೋರಂಜನೆ ಕೂಡ ನೀಡಿದೆವು' ಎಂದು ತಿಳಿಸಿದರು. ರಿಷಭ್ ಪಂತ್ ಅವರನ್ನು ಭೇಟಿಯಾದ ನಂತರ ಅನುಪಮ್ ಖೇರ್ ಮತ್ತು ಅನಿಲ್ ಕಪೂರ್ ತುಂಬಾ ಖುಷಿಯಾಗಿದ್ದಾರೆ. ಕ್ರಿಕೆಟಿಗ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಇಬ್ಬರೂ ಹೇಳಿದ್ದಾರೆ.
ಹಿರಿಯ ನಟರ ಸಲಹೆಯೇನು? ಹೊಸ ವರ್ಷದಂದು ತನ್ನ ತಾಯಿಗೆ ಸರ್ಪ್ರೈಸ್ ಕೊಡಲು ರಿಷಭ್ ಪಂತ್ ಅವರು ತಮ್ಮ ರೂರ್ಕಿ (ಉತ್ತರಾಖಂಡ) ಮನೆಗೆ ತಾವೇ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಅತಿ ವೇಗದ ಹಿನ್ನೆಲೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಭೀಕರ ದೃಶ್ಯದ ಸಿಸಿಟಿವಿ ವಿಡಿಯೋ ಕೂಡ ಎಲ್ಲೆಡೆ ವೈರಲ್ ಅಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನಿಲ್ ಮತ್ತು ಅನುಪಮ್ ಕೂಡ ರಿಷಭ್ ಸೇರಿದಂತೆ ಜನರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಿದ್ರೆಯ ಮಂಪರು, ಅತಿವೇಗದಿಂದ ಅಪಘಾತ: ರಿಷಭ್ ಪಂತ್ ದೆಹಲಿಗೆ ಏರ್ಲಿಫ್ಟ್ ಸಾಧ್ಯತೆ
ದೆಹಲಿಗೆ ಏರ್ಲಿಫ್ಟ್: ಇನ್ನೂ ರಿಷಭ್ ಅವರ ಬೆನ್ನು, ತಲೆ, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರನ್ನು ದೆಹಲಿಗೆ ಏರ್ಲಿಫ್ಟ್ ಮಾಡುವ ಸಾಧ್ಯತೆ ಇದೆ.
ಪೊಲೀಸ್ ಮಾಹಿತಿ: ಕ್ರಿಕೆಟಿಗ ರಿಷಭ್ ಪಂತ್ ಒಂಟಿಯಾಗಿ ಕಾರು ಚಲಾಯಿಸಿಕೊಂಡು ರೂರ್ಕಿಗೆ ಹೋಗುತ್ತಿದ್ದಾಗ ನಿದ್ರೆಯ ಮಂಪರು ಬಂದಿದೆ. ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ. ನಿದ್ರೆಯ ಕಾರಣ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ. ಸೀಟ್ ಬೆಲ್ಟ್ ಕೂಡ ಹಾಕಿಕೊಂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ ಕಾರು ಅಪಘಾತ: ನಟಿ ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು?