ವಂಚಕ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್, ನೋರಾ ಫತೇಹಿ ಮತ್ತು ಇವರಿಗೆ ಸಹಾಯ ಮಾಡಿದ ಆರೋಪ ಹೊತ್ತ ಪಿಂಕಿ ಇರಾನಿ ಈಗಾಗಲೇ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಗೆ ಹಾಜರಾಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತೆ ನಾಲ್ವರು ಮಾಡೆಲ್, ನಟಿಯರ ಹೆಸರೂ ಕೂಡಾ ಥಳಕು ಹಾಕಿಕೊಂಡಿದೆ. ಈ ವಂಚಕ ಅವರಿಗೂ ಹಣ ಮತ್ತು ದುಬಾರಿ ಉಡುಗೊರೆಗಳನ್ನು ನೀಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿ, ಬಡೇ ಅಚ್ಚೆ ಲಗ್ತೇ ಹೈ ಖ್ಯಾತಿಯ ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಜೈಲು ಆವರಣದಲ್ಲಿ ಸುಕೇಶ್ ಚಂದ್ರಶೇಖರ್ನನ್ನು ಭೇಟಿಯಾಗಿದ್ದಾರೆ. ಅವರಲ್ಲಿ ದಕ್ಷಿಣ ಚಿತ್ರರಂಗದ ನಿರ್ಮಾಪಕ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದನಂತೆ. ಚಂದ್ರಶೇಖರ್ನ ಸಹಾಯಕಿ ಪಿಂಕಿ ಇರಾನಿ ಅವರು ಚಂದ್ರಶೇಖರ್ನನ್ನು ಭೇಟಿಯಾಗಲು ಈ ನಟಿಮಣಿಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಈ ನಾಲ್ವರು ನಟಿಯರಿಗೆ ಹೆಸರಾಂತ ಬ್ರಾಂಡ್‌ಗಳ ದುಬಾರಿ ಉಡುಗೊರೆಗಳನ್ನು ನೀಡಲಾಗಿದೆ. ಅರುಷಾ ಪಾಟೀಲ್ ಖಾತೆಗೆ ಚಂದ್ರಶೇಖರ್ ಸುಮಾರು 5.20 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾನೆ. ಅರುಷಾ ಪಾಟೀಲ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಚಂದ್ರಶೇಖರ್ನನ್ನು ಭೇಟಿಯಾಗಿದ್ದೇನೆ, ಆದರೆ ಜೈಲಿನಲ್ಲಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಪಿಂಕಿ ಇರಾನಿ ಅವರು ಚಾಹತ್ ಖನ್ನಾ ಅವರನ್ನು ಚಂದ್ರಶೇಖರ್‌ಗೆ ಪರಿಚಯಿಸಿದ್ದು, ಆ ವೇಳೆ 2 ಲಕ್ಷ ರೂಪಾಯಿ ಮತ್ತು ದುಬಾರಿ ವಾಚ್ ನೀಡಲಾಗಿತ್ತು ಎನ್ನಲಾಗಿದೆ. ಇನ್ನು, ಸೋಫಿಯಾ ಸಿಂಗ್ ಅವರ ಖಾತೆಗೆ 2 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ್ದಾನೆ, ನಂತರ ದುಬಾರಿ ಮೌಲ್ಯದ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಮತ್ತೊಮ್ಮೆ 1.5 ಲಕ್ಷ ರೂ. ಹಣ ನೀಡಿದ್ದಾನೆಂದು ಮೂಲಗಳು ತಿಳಿಸಿವೆ.
ಪಿಂಕಿ ಇರಾನಿಯು ಸುಕೇಶ್ನನ್ನು ನಿಕ್ಕಿ ತಂಬೋಲಿಗೆ ಪರಿಚಯಿಸಲು ಆತನಿಂದ 10 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ಅವರು ತಂಬೋಲಿಗೆ 1.5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಬಳಿಕ, ಚಂದ್ರಶೇಖರ್ ತಮ್ಮ ಮೊದಲ ಭೇಟಿಯಲ್ಲಿ ತಂಬೋಲಿಗೆ ದುಬಾರಿ ಬ್ರ್ಯಾಂಡೆಡ್ ಬ್ಯಾಗ್ ಮತ್ತು 2 ಲಕ್ಷ ರೂ. ನೀಡಿದ್ದಾನೆಂಬ ಮಾಹಿತಿ ಲಭ್ಯವಾಗಿದೆ.
ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ಬುಧವಾರ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಫರ್ನಾಂಡಿಸ್ ಅವರನ್ನು ಚಂದ್ರಶೇಖರ್‌ಗೆ ಪರಿಚಯಿಸಿದ ನಟಿ ನೋರಾ ಫತೇಹಿ ಮತ್ತು ಪಿಂಕಿ ಇರಾನಿ ಅವರನ್ನು ಗುರುವಾರ ವಿಚಾರಣೆಗೆ ಕರೆಸಲಾಗಿತ್ತು. ಪಿಂಕಿ ಇರಾನಿ ಎರಡು ದಿನಗಳ ವಿಚಾರಣೆಗೆ ಒಳಗಾಗಿದ್ದರು.
ಇದನ್ನೂ ಓದಿ: ಬಹುಕೋಟಿ ವಂಚನೆ ಕೇಸ್: ಜಾಕ್ವೆಲಿನ್ ಬಳಿಕ ವಿಚಾರಣೆಗೆ ಹಾಜರಾದ ನೋರಾ ಫತೇಹಿ
ಬಾಲಿವುಡ್ನ ಬಳುಕುವ ಬಳ್ಳಿ ನೋರಾ ಫತೇಹಿ, ಪ್ರಕರಣದಲ್ಲಿ ಎರಡನೇ ಬಾರಿಗೆ ಗುರುವಾರದಂದು ವಿಚಾರಣೆ ಎದುರಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 2 ರಂದು ನೋರಾ ಅವರನ್ನು 7 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಮತ್ತೆ ಗುರುವಾರ ಕರೆಸಲಾಗಿತ್ತು. ನಿನ್ನೆ ಪಿಂಕಿ ಇರಾನಿ ಮತ್ತು ನಟಿ ನೋರಾ ಅವರ ಹೇಳಿಕೆಗಳಲ್ಲಿ ವಿರೋಧಾಭಾಸಗಳಿದ್ದ ಹಿನ್ನೆಲೆಯಲ್ಲಿ ಬಳಿಕ ಇಬ್ಬರನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಯಿತು.