ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಲಕ್ಷ್ಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 70ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರಿಗೆ ಆತ್ಮೀಯರು, ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಶುಭಾಶಯ ಕೋರುತ್ತಿದ್ದಾರೆ.
ಬಹು ಭಾಷೆಯಲ್ಲಿ ಅಭಿನಯಿಸಿ, ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವ ಈ ಕಲಾವಿದೆ 1952ರ 13 ಡಿಸೆಂಬರ್ನಲ್ಲಿ ಜನಿಸಿದರು. ಅವರ ಮೂಲ ಹೆಸರು ಯರಗುಡಿಪಾಡಿ ವೆಂಕಟ ಮಹಾಲಕ್ಷ್ಮಿ. ಇವರ ತಂದೆ ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ'ದ ನಿರ್ದೇಶಕ ವೈ.ವಿ. ರಾವ್ ಮತ್ತು ತಾಯಿ ಹೆಸರಾಂತ ತಮಿಳು ಕಲಾವಿದೆ ಕುಮಾರಿ ರುಕ್ಮಿಣಿ.
1961ರಲ್ಲಿ 'ಶ್ರೀ ವಲ್ಲಿ' ಎಂಬ ತಮಿಳು ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, 1968ರಲ್ಲಿ ತಮಿಳು ಸಿನಿಮಾ 'ಜೀವನಾಂಶ'ದಲ್ಲಿ ನಟಿಯಾಗಿ ಮೊದಲ ಬಾರಿಗೆ ಮಿಂಚಿದರು. ಆದರೆ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದು 1975 ರಲ್ಲಿ ತೆರೆಗೆ ಬಂದ ' ಜೂಲಿ' ಚಿತ್ರದಿಂದ. ಕನ್ನಡದಲ್ಲಿ 'ಕತೆಯಲ್ಲ ಜೀವನ', ಅದಕ್ಕೂ ಮೊದಲು ತಮಿಳಿನಲ್ಲಿ 'ಅಚ್ಚುಮಿಲೈ ಅಚ್ಚುಮಿಲೈ' ಕಾರ್ಯರ್ಕ್ರಮದ ಮೂಲಕ ಸಾಮಾಜಿಕ ಕಳಕಳಿ ಮೆರೆದು ಪ್ರಸಿದ್ಧಿ ಪಡೆದಿದ್ದಾರೆ.
![Actress lakshmi Birthday](https://etvbharatimages.akamaized.net/etvbharat/prod-images/17191376_newss.jpg)
ನಟಿ ಲಕ್ಷ್ಮಿ ಸಿನಿಮಾಗಳು: ಗೋವಾದಲ್ಲಿ ಸಿಐಡಿ 999, ವಂಶಿ, ಟೋನಿ, ಒಲವು ಮೂಡಿದಾಗ, ನಾನೊಬ್ಬ ಕಳ್ಳ, ಗಾಳಿ ಮಾತು, ನಾ ನಿನ್ನ ಮರೆಯಲಾರೆ, ಒಲವು ಗೆಲುವು, ಚಂದನದ ಗೊಂಬೆ, ಬಂಗಾರದ ಬದುಕು, ನನ್ನವರು, ಕುಂಕುಮ ಭಾಗ್ಯ, ಬುದ್ಧಿವಂತ, ತ್ರಿಕೋನ ಸೇರಿದಂತೆ ಅನೇಕ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿಯಿಂದ ನೇಮ ಸೇವೆ.. ಕಾಂತಾರ 2ಗೆ ಅಣ್ಣಪ್ಪನ ಅಪ್ಪಣೆ ಆದೇಶ
ವಿವಿಧ ಭಾಷೆಗಳಲ್ಲಿ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ ಲಕ್ಷ್ಮಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 9 ಫಿಲ್ಮ್‌ಫೇರ್ ಪ್ರಶಸ್ತಿಗಳು, ಮೂರು ನಂದಿ ಪ್ರಶಸ್ತಿಗಳು, ಹೂವು ಹಣ್ಣು ಚಲನಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.