2007ರಲ್ಲಿ 18ರ ಹರೆಯದಲ್ಲೇ 'ಸಿಕ್ಸರ್' ಸಿನಿಮಾ ಮೂಲಕ ಹೀರೋ ಆಗಿ ಸಕ್ಸಸ್ ಕಂಡ ನಟ ಪ್ರಜ್ವಲ್ ದೇವರಾಜ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ಗೆ 'ಮಾಫಿಯಾ' ಚಿತ್ರತಂಡದಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ.
ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಚಂದ್ರಲೇಖಾ ದಂಪತಿಗೆ 1987ರ ಜುಲೈ 4ರಂದು ಬೆಂಗಳೂರಿನಲ್ಲಿ ಪ್ರಜ್ವಲ್ ದೇವರಾಜ್ ಜನಿಸಿದರು. ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಕಾಲೇಜ್ ವಿದ್ಯಾರ್ಥಿಯಾಗಿದ್ದ ಅವರು ಕಾಲೇಜು ದಿನಗಳಿಂದಲೇ ನಟನೆಯತ್ತ ಆಸಕ್ತಿ ಹೊಂದಿದ್ದರು. ಅದರಂತೆ ಸಿಕ್ಸರ್ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರವನ್ನು ರಾಮೋಜಿ ಗ್ರೂಪ್ ಚೇರ್ಮನ್, ಸಿನಿಮಾ ಪ್ರೇಮಿ ರಾಮೋಜಿ ರಾವ್ ಅವರು ನಿರ್ಮಿಸಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಮಾಡಿತ್ತು. ಬಳಿಕ ಪ್ರಜ್ವಲ್ರ 'ಗೆಳೆಯ' ಚಿತ್ರವೂ ಸಹ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿತ್ತು.
![A special gift from Mafia film team for Prajwal Devaraj birthday](https://etvbharatimages.akamaized.net/etvbharat/prod-images/kn-bng-01-prajwal-devaraju-birthdayge-mafiaya-cinema-teamnidha-slpgift-7204735_04072022103857_0407f_1656911337_790.jpg)
ತದನಂತರ ಮೆರವಣಿಗೆ, ಗುಲಾಮ, ಮುರುಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರಿ, ಗಲಾಟೆ, ಚೌಕ, ಜಂಟಲ್ ಮ್ಯಾನ್, ಇನ್ಸ್ಪೆಕ್ಟರ್ ವಿಕ್ರಂ ಹಾಗೂ ಸದ್ಯ ಬಿಡುಗಡೆಗೆ ರೆಡಿಯಾಗಿರುವ 'ವೀರಂ' ಹಾಗು 'ಮಾಫಿಯಾ' ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ.
ಚಿತ್ರರಂಗದಲ್ಲಿ ದಶಕ ಪೂರೈಸಿರುವ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಮಾಫಿಯಾ ಚಿತ್ರತಂಡವು ಮಾಸ್ ಪೋಸ್ಟರ್ ಬಿಡುಗಡೆ ಮಾಡಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರದ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಜುಲೈ ಅಂತ್ಯದ ವೇಳೆಗೆ ಮುಕ್ತಾಯವಾಗಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಪ್ರಜ್ವಲ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ನಿರ್ಮಿಸುತ್ತಿರುವ ಈ ಚಿತ್ರವನ್ನು ಲೋಹಿತ್ ಹೆಚ್. ನಿರ್ದೇಶಿಸುತ್ತಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
![A special gift from Mafia film team for Prajwal Devaraj birthday](https://etvbharatimages.akamaized.net/etvbharat/prod-images/kn-bng-01-prajwal-devaraju-birthdayge-mafiaya-cinema-teamnidha-slpgift-7204735_04072022103857_0407f_1656911337_670.jpg)
2015ರಲ್ಲಿ ಪ್ರಜ್ವಲ್ ದೇವರಾಜ್ ಅವರು ರಾಗಿಣಿ ಚಂದ್ರನ್ ಜೊತೆ ಹಸೆಮಣೆ ಏರಿದ್ದರು. ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಗಳಲ್ಲಿ ರಾಗಿಣಿ ಚಂದ್ರನ್ ಹಾಗೂ ಪ್ರಜ್ವಲ್ ದೇವರಾಜ್ ಜೋಡಿಯೂ ಒಂದಾಗಿದೆ. ರೂಪದರ್ಶಿ ಮತ್ತು ಶಾಸ್ತ್ರೀಯ ನರ್ತಕಿಯಾಗಿರುವ ರಾಗಿಣಿ, ಪ್ರಜ್ವಲ್ರ ಬಾಲ್ಯದ ಗೆಳತಿಯಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಸಿನಿ ಶೆಟ್ಟಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ!