ಸಿಧಿ (ಮಧ್ಯಪ್ರದೇಶ): ಬರೋಬ್ಬರಿ 51 ಮಂದಿ ಪ್ರಯಾಣಿಕರನ್ನು ಬಲಿ ಪಡೆದ ಸಿಧಿ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಮಾನತು ಮಾಡಿದ್ದಾರೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಹಾಗೂ ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮದ (ಎಂಪಿಆರ್‌ಡಿಸಿ) ಮ್ಯಾನೇಜರ್ ಸೇರಿ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತಿದ್ದೇನೆ ಎಂದು ಮಾಧ್ಯಮಗೋಷ್ಟಿಯಲ್ಲಿ ಸಿಎಂ ತಿಳಿಸಿದ್ದಾರೆ. 32 ಆಸನಗಳ ಸಾಮರ್ಥ್ಯದ ಬಸ್ನಲ್ಲಿ 62 ಮಂದಿ ಪ್ರಯಾಣಿಸುತ್ತಿದ್ದರು. ಇದಕ್ಕೆ ಯಾರು ಹೊಣೆ? ಘಟನೆಗೆ ಕಾರಣರಾದ ಇತರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಶಿವರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರು ಸಾವು, 24ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಗಳವಾರ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್ ಕಾಲುವೆಗೆ ಉರುಳಿ ಬಿದ್ದು 51 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದ ಸಿಎಂ ಚೌಹಾಣ್, 7 ಲಕ್ಷ ರೂ.ಗಳ ಚೆಕ್ ಅನ್ನು ಪ್ರತಿ ಕುಟುಂಬಕ್ಕೆ ನೀಡಿದ್ದರು.
ದುರಂತಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಪಿಎಂ ನರೇಂದ್ರ ಮೋದಿ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದರು.