ಬೆಂಗಳೂರು : ಮೋಸದಿಂದ ತಂದೆ ಬಳಿ ಸಹಿ ಹಾಕಿಸಿಕೊಂಡು ಅಕ್ರಮವಾಗಿ ನಿವೇಶನ ಕಬಳಿಕೆ ಮಾಡಿರುವುದಾಗಿ ಆರೋಪಿಸಿ ನ್ಯಾಯಕ್ಕಾಗಿ ಲೋಕಾಯುಕ್ತ ಪ್ರಧಾನ ಕಚೇರಿಯ ಬಾಗಿಲಿಗೆ ಬಂದಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ಜಾಪುರದ ಅರಸಪ್ಪಲೇಔಟ್ ನಿವಾಸಿ ಮಂಜುನಾಥ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದವರು. ಬೌರಿಂಗ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದಾರೆ.
ಅವಿವಾಹಿತರಾಗಿರುವ ಮಂಜುನಾಥ್, ತಾಯಿ, ಸಹೋದರಿ ಜೊತೆ ವಾಸವಾಗಿದ್ದಾರೆ. ಇವರ ತಂದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಸಾವಿಗೂ ಮುನ್ನ ತಂದೆ ಸುಂಕದಕಟ್ಟೆಯಲ್ಲಿ ಸೈಟ್ ಖರೀದಿಸಿದ್ದರು.
ನಿವೇಶನ ಅಡವಿಟ್ಟು 50 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ ಎಂದು ಹೇಳಿ ಕೇಶವ ಎಂಬುವರು ನಿವೇಶನವನ್ನು ಮೋಸದಿಂದ ಕಬಳಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ನಿಮ್ಮ ತಂದೆಯೇ ಸೈಟು ಮಾರಿರುವುದಾಗಿ ಹೇಳಿದ್ದಾರಂತೆ. ಇದರಿಂದ ಮನನೊಂದ ಮಂಜುನಾಥ್ ಡಿ.17 ರಂದು ಮಧ್ಯಾಹ್ನ ಲೋಕಾಯುಕ್ತ ಕಚೇರಿಗೆ ದೂರು ನೀಡಲು ಬಂದಿದ್ದಾರೆ.
ಸ್ವಾಗತಕಾರರ ವಿಭಾಗದ ಬಳಿ ದೂರು ನೀಡುತ್ತಿದ್ದಂತೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಕಚೇರಿ ಸಿಬ್ಬಂದಿ ರಿಜಿಸ್ಟ್ರಾರ್ ಅವರ ಗಮನಕ್ಕೆ ತಂದಿದ್ದಾರೆ. ರಿಜಿಸ್ಟ್ರಾರ್ ಕಾರಿನಲ್ಲೇ ಸಿಬ್ಬಂದಿ ಈತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ವಿಧಾನಸೌಧ ಪೊಲೀಸರು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ.
ದೂರು ಕೊಡಲು ಲೋಕಾಯುಕ್ತ ಕಚೇರಿಗೆ ಬರುವ ಮೊದಲೇ ವಿಷ ಸೇವಿಸಿರುವ ಮಂಜುನಾಥ್, ತಾನು ಸಾವನ್ನಪ್ಪಿದರೆ ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿರುವ ಕೇಶವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದು ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಗಂಭೀರವಾಗಿ ಪರಿಗಣಿಸಿದ್ದಾರೆ.
ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಮಂಜುನಾಥ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಂಜುನಾಥ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಐಪಿಸಿ 309ರಡಿ ಆತ್ಮಹತ್ಯೆ ಯತ್ನಿಸಿದ ಪ್ರಕರಣದಡಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ, ಬಾಲಕ ಸಾವು