ಅಲಿಗಢ್ (ಉತ್ತರ ಪ್ರದೇಶ): ಒಂದೂವರೆ ಲಕ್ಷ ರೂಪಾಯಿ ಕರೆಂಟ್ ಬಿಲ್ ನೀಡಿದ್ದಲ್ಲದೇ ವಿದ್ಯುತ್ ಇಲಾಖೆ ಅಧಿಕಾರಿಗಳು ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ವರ್ತನೆಯಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಅಲಿಗಢ್ನ ಸುನೈರಾ ಗ್ರಾಮದ ರಾಮ್‌ಜಿ ಲಾಲ್ ಮೃತ ರೈತ. ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ರಾಮ್‌ಜಿ ಲಾಲ್, ಬಿಲ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಕುಟುಂಬಸ್ಥರ ಮುಂದೆಯೇ ಅಧಿಕಾರಿಗಳು ರೈತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ.
ರಾಮ್‌ಜಿ ಲಾಲ್ ಅವರ ಕುಟುಂಬಸ್ಥರು 1,500 ರೂಪಾಯಿಯನ್ನು 1,50,000 ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಲಾಗಿದೆ. ಎಲ್ಲಾ ಪ್ರಯತ್ನಗಳು ವಿಫಲವಾದಾಗ ರಾಮ್‌ಜಿ ಲಾಲ್ ನೇಣಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಪ್ರತಿಭಟನೆಗೆ ಟೂಲ್ಕಿಟ್ ಪ್ರಸಾರ ಮಾಡಿದ ಆರೋಪಿ ದಿಶಾ ರವಿ ಹಿನ್ನೆಲೆ ಗೊತ್ತಾ?
ಆಕ್ರೋಶಗೊಂದ ಕುಟುಂಬಸ್ಥರು ಹಾಗೂ ಸ್ಥಳೀಯರು ವಿದ್ಯುತ್ ಇಲಾಖೆ ಕಚೇರಿ ಮುಂದೆ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್‌ಡಿಒ ಮತ್ತು ಜೂನಿಯರ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಪೊಲೀಸರು ಭರವಸೆ ನೀಡಿದ್ದಾರೆ.