ಶಿವಮೊಗ್ಗ: ನಮ್ಮ ಶಾಲೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದೇವೆ. ಶಾಲೆಯನ್ನು ಪುನಃ ಪ್ರಾರಂಭಿಸಲು ನಾವು ಕೆಲಸ ಮಾಡಿದ್ದೇವೆ. ಇಂತಹ ಶಾಲೆಯಲ್ಲಿ ನೀವು ಕಪ್ಪು ಪಟ್ಟಿ ಧರಿಸಬೇಡಿ. ಕಪ್ಪು ಪಟ್ಟಿ ಧರಿಸಿದರೆ ಶಾಲೆಯಿಂದ ಹೊರಗೆ ಹೋಗಿ ಅಂತ ಶಿಕ್ಷಕರಿಗೆ ಗ್ರಾಮಸ್ಥರು ಗದರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದ ಮಲವಗೊಪ್ಪ ಶಾಲೆಗೆ ಭೇಟಿ ನೀಡಿದ ವೇಳೆ, ಪ್ರಾಥಮಿಕ ಶಾಲಾ ಶಿಕ್ಷಕರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿದ್ದರು. ಈ ವೇಳೆ ಶಾಲೆಗೆ ಆಗಮಿಸಿ ಮಲವಗೊಪ್ಪ ಗ್ರಾಮದ ವೆಂಕನಾಯ್ಕರವರು ಶಿಕ್ಷಕರಿಗೆ ನಮ್ಮ ಶಾಲೆಯಲ್ಲಿ ಯಾರು ಕಪ್ಪು ಪಟ್ಟಿ ಧರಿಸಬೇಡಿ ಎಂದು ತಾಕೀತು ಮಾಡಿದರು.
ನಮ್ಮ ಶಾಲೆಯನ್ನು ಉಳಿಸಿಕೊಳ್ಳಲು ನಾವು ಕಷ್ಟಪಟ್ಟಿದ್ದೇವೆ. ಈಗ ರಾಷ್ಟ್ರೀಯ ಹೆದ್ದಾರಿಯಿಂದ ಈ ಶಾಲೆ ಹೋಗುತ್ತೆ ಎಂದು ಹೇಳುತ್ತಿದ್ದಾರೆ. ನಾವು ಶಾಲೆ ಉಳಿಸಿಕೊಳ್ಳಬೇಕು ಎಂದುಕೊಂಡಿದ್ದೇವೆ. ನೀವು ಪ್ರತಿಭಟನೆ ಮಾಡ್ತಿರಾ? ಪ್ರತಿಭಟನೆ ಮಾಡುವುದಾದರೆ, ನಮ್ಮ ಶಾಲೆಯಿಂದ ಹೊರಗೆ ಹೋಗಿ ಎಂದರು.
ವೆಂಕನಾಯ್ಕ ಅವರನ್ನು ಶಾಲೆಯ ಶಿಕ್ಷಕರ ಜೊತೆ ಶಿಕ್ಷಕ ಸಂಘಟನೆಯವರು ಸಮಾಧಾನಪಡಿಸಲು ಮುಂದಾದರು. ಈ ವೇಳೆ ಬಿಜೆಪಿಯ ಮುಖಂಡರು ಕೂಡಾ ಶಿಕ್ಷಕ ಸಂಘದದವರಿಗೆ ನೀವು ಮನವಿ ನೀಡುವುದಾದರೆ, ಶಾಲೆಯಿಂದ ಹೊರಗೆ ಹೋಗಿ ಮನವಿ ನೀಡಿ ಎಂದು ತಾಕೀತು ಮಾಡಿದರು. ನಂತರ ಸಂಘದವರು ಶಾಲೆಯಿಂದ ಹೊರಗೆ ಹೋಗಿ ಸಚಿವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿ ಪತ್ನಿ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ ಹುಬ್ಬಳ್ಳಿ ವೈದ್ಯ