ಶಿವಮೊಗ್ಗ : ಜಿಲ್ಲೆಯಲ್ಲಿ ತೆಂಗು ಬೆಳೆಗೆ ತೊಂದರೆ ನೀಡುತ್ತಿರುವ ಕಪ್ಪು ತಲೆ ಹುಳುಗಳ ನಿವಾರಣೆ ಹಾಗೂ ತಡೆಗಟ್ಟುವ ಕುರಿತು ರೈತರಿಗೆ ತೋಟಗಾರಿಕೆ ಇಲಾಖೆ ಉಪಯುಕ್ತ ಸಲಹೆ ನೀಡಿದೆ.
ಕಪ್ಪು ತಲೆ ಹುಳುಗಳು ತೆಂಗಿನ ಗರಿಗಳ ತಳಭಾಗದ ಬಲೆಯೊಳಗೆ ಸೇರಿಕೊಂಡು, ಹರಿಯ ಹಸಿರು ಭಾಗವನ್ನು ಕೊರೆದು ತಿನ್ನುವುದರಿಂದ ಗರಿಗಳ ಮೇಲೆ ಒಣ ಹುಲ್ಲಿನ ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ಈ ಹುಳುವಿನ ಬಾಧೆಯು ಕೆಳಗಿನ ಗರಿಗಳಿಂದ ಪ್ರಾರಂಭವಾಗಿ ನಂತರ ಮೇಲಿನ ಗರಿಗಳಿಗೆ ಹರಡುತ್ತವೆ. ಹುಳುವಿನ ತೀವ್ರತೆ ಜಾಸ್ತಿಯಾದಾಗ ಮರಗಳ ಗರಿಗಳು ಸುಟ್ಟಂತಾಗಿ ಇಳುವರಿ ಕಡಿಮೆಯಾಗುತ್ತದೆ.
ರೋಗ ನಿಯಂತ್ರಣ ಕ್ರಮಗಳನ್ನು ಪಾಲಿಸಿ:
ಪ್ರಾರಂಭಿಕ ಹಂತದಲ್ಲಿ ಬಾಧೆಗೊಳಗಾದ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. ತೋಟದಲ್ಲಿ ಸ್ವಚ್ಛತೆ ಕಾಪಾಡಬೇಕು. ಕೀಟವು ಮರಿ ಹುಳುವಿನ ಹಂತದಲ್ಲಿದ್ದಾಗ ಗೋನಿನೋಜಸ್ ನೆಫಾಂಟಿಡಿಸ್ ಪರೋಪಕಾರಿ ಜೀವಿಗಳನ್ನು ಪ್ರತಿ ಕೀಟ ಬಾಧಿತ ಮರಕ್ಕೆ ಸುಮಾರು 12 ರಿಂದ 15 ರಂತೆ, ಪ್ರತಿ 15 ದಿನಗಳಿಗೊಮ್ಮೆ 4 ಬಾರಿ ಬಿಡುಗಡೆ ಮಾಡಬೇಕು.
ಗರಿ ತಿನ್ನುವ ಹುಳುವಿನ ಹಾನಿಯನ್ನು ಕಡಿಮೆ ಮಾಡಲು, ಬಾಧೆಗೆ ತುತ್ತಾದ ಗರಿಗಳನ್ನು ತೆಗೆದು ಸುಡಬೇಕು. 4 ಗ್ರಾಂ ಕಾರ್ಬಾರಿಲ್ 50 ಡಬ್ಲ್ಯೂಪಿ ಪ್ರತಿ ಲೀ. ನೀರಿನಲ್ಲಿ ಕರಗಿಸಿ ಮರಗಳಿಗೆ ಸಿಂಪಡಿಸಬೇಕು. ಈ ಕೀಟದ ತೊಂದರೆ ಅಧಿಕವಾಗಿದ್ದಲ್ಲಿ ಮಾನೋಕ್ರೋಟೊಫಾಸ್ 36 ಎಸ್.ಎಲ್. ಕೀಟನಾಶಕವನ್ನು ಬೇರುಗಳ ಮುಖಾಂತರವೂ ಕೊಡಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.