ಶಿವಮೊಗ್ಗ: ದೇಶದಲ್ಲಿಯೇ ಅಪರೂಪದಲ್ಲಿ ಅಪರೂಪವಾದ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಸಾಗರದ ವೈದ್ಯರು ನಡೆಸಿ ಯಶಸ್ವಿಯಾಗಿದ್ದಾರೆ. ಇದು ಮಧ್ಯ ಆಫ್ರಿಕಾದಲ್ಲಿ ಕಂಡು ಬರುವ ಕಣ್ಣಿನ ವ್ಯಾಧಿಯಾಗಿದ್ದು, ಭಾರತದಲ್ಲಿ ಈಗ ಪಶ್ಚಿಮ ಘಟ್ಟದಲ್ಲಿ ಕಂಡು ಬಂದಿದೆ. ಲೋವಾ ಲೋವಾ ಎಂಬ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಯುವಕನ ಕಣ್ಣನ್ನು ರಕ್ಷಿಸಲಾಗಿದೆ.
ಸಾಗರ ತಾಲೂಕು ಮಂಡಗಳಲೆ ಗ್ರಾಮದ 19 ವರ್ಷದ ಯುವಕನೋರ್ವ ಕಣ್ಣು ನೋವೆಂದು ಬಂದಾಗ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿನಲ್ಲಿ ಹುಳವೊಂದು ಓಡಾಡುತ್ತಿರುವುದನ್ನು ಕಂಡು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಆಸ್ಪತ್ರೆಯ ಕಣ್ಣಿನ ವಿಭಾಗದ ವೈದ್ಯಾಧಿಕಾರಿ ಡಾ.ಪ್ರಮೋದ್ ತಿಳಿದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯುವಕನ ಕಣ್ಣಿನಲ್ಲಿದ್ದ 3 ಸೆಂ.ಮೀ ಉದ್ದ ಲೋವಾ ಲೋವಾ ಎಂಬ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಒಟ್ಟಾರೆ ಮೊದಲ ವಿಶೇಷ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಇಂತಹ ಸಮಸ್ಯೆ ನಮ್ಮ ದೇಶದಲ್ಲಿ ಅಪರೂಪಕ್ಕೆ ಕಂಡುಬರುತ್ತೆ. ಇದು ಹೆಚ್ಚಾಗಿ ಮಧ್ಯ ಆಫ್ರಿಕಾ ದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ಈ ರೀತಿಯ ಶಸ್ತ್ರ ಚಿಕಿತ್ಸೆ ಈವರೆಗೆ ಕೇವಲ 10 ಮಾತ್ರ ನಡೆದಿವೆ. ಇದರಲ್ಲಿ ಬಹುತೇಕ ಮಧ್ಯ ಆಫ್ರಿಕಾದಿಂದ ಬಂದವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದು ಡೀರ್ ಹಾಗೂ ಮ್ಯಾಂಗ್ಯೂ ಎಂಬ ಸಣ್ಣ ಹುಳದ ಕಡಿತದಿಂದ ಹುಳ ನಮ್ಮ ದೇಹಕ್ಕೆ ಸೇರ್ಪಡೆಯಾಗುತ್ತದೆ. ಹುಳವು ರಕ್ತದ ಮೂಲಕ ದೇಹಕ್ಕೆ ಸೇರಿ ನಂತರ ಅದು ಕಣ್ಣಿನಲ್ಲಿ ಬೆಳವಣಿಗೆ ಆಗುತ್ತದೆ. ಮೊದಲು ಕಣ್ಣಿನ ಬಿಳಿ ಭಾಗದಲ್ಲಿ ಬೆಳೆಯುವ ಇದು ನಂತರ ಕಣ್ಣಿನ ಅಕ್ಷಿ ಪಟಲಕ್ಕೆ ಹೋಗಿ ನಮ್ಮ ಕಣ್ಣಿನ ದೃಷ್ಟಿ ಇರುವ ಕರಿಗುಡ್ಡೆಗೆ ಹಾನಿ ಮಾಡುತ್ತದೆ. ಇದರಿಂದ ಮನುಷ್ಯನಿಗೆ ಶಾಶ್ವತ ಅಂಧತ್ವ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನೂ ವೈದ್ಯರು ಹಂಚಿಕೊಂಡಿದ್ದಾರೆ.
ನಮ್ಮ ಸಾಗರ ಆಸ್ಪತ್ರೆಯಲ್ಲಿ ಇದು ಮೊದಲ ಹಾಗೂ ವಿಶೇಷ ಶಸ್ತ್ರಚಿಕಿತ್ಸೆ ಎಂದು ಡಾಕ್ಟರ್ ಪ್ರಮೋದ್ ತಿಳಿಸಿದ್ದಾರೆ. ಹುಳದ ಕುರಿತು ಮತ್ತಷ್ಟು ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಶೇಷ ಅಪರೂಪದ ಕಣ್ಣಿನ ಶಸ್ತ್ರಚಿಕಿತ್ಸೆಗೆ ಡಾ.ಪ್ರಮೋದ್ ಅವರಿಗೆ ಫಿಜಿಶಿಯನ್ ಡಾ.ಸುಭೋತ್, ಓ.ಟಿ ಟೆಕ್ನಿಷಿಯನ್ ಪ್ರಜಾವಲ್ಯ, ಸ್ಟಾಫ್ ನರ್ಸ್ಗಳಾದ ವಸಂತ, ಜುಬೇದಾ ಅವರು ಸಾಥ್ ನೀಡಿದರು. ಕಳೆದ ಎರಡು ವರ್ಷಗಳ ಹಿಂದೆ ಶಿರಸಿಯಲ್ಲೂ ಇಂತಹ ನೇತ್ರ ಚಿಕಿತ್ಸೆ ನಡೆಸಲಾಗಿತ್ತು.
ಇದನ್ನೂ ಓದಿ: ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆ.. ಬಾಹ್ಯ ರೂಪದ ಮಿಲನ ಪ್ರಕ್ರಿಯೆ ಎಂದರೇನು?