ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂಬ ವಿಚಾರದ ನಡುವೆ ಬಿಎಸ್‌ವೈ ಸರ್ಕಾರ ಕಾರ್ಯಕ್ರಮಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ, ಇದೇ 24 ರಂದು ಶಿವಮೊಗ್ಗ ಜಿಲ್ಲೆಯಲ್ಲಿನ ಬರೋಬ್ಬರಿ 1,700 ಕೋಟಿ ರೂ.ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
185 ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, 100 ಕೋಟಿ ರೂ.ಗಳ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, 120ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಜಿಲ್ಲಾಡಳಿತ ಭವನ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಬೆಂಗಳೂರಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿರುವ ಸಿಎಂ ಯಡಿಯೂರಪ್ಪ, 107.89 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಕಾಮಗಾರಿ, 20.89 ಕೋಟಿ ರೂ.ಗಳ ವೆಚ್ಚದಲ್ಲಿ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವನ ಅಭಿವೃದ್ಧಿ, 32 ಕೋಟಿ ರೂ.ಗಳ ವೆಚ್ಚದಲ್ಲಿ ಊರಗಡೂರು ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣ, 55 ಕೋಟಿ ರೂ.ಗಳ ವೆಚ್ಚದಲ್ಲಿ ರಾ.ಹೆ.169ರ (ತೀರ್ಥಹಳ್ಳಿ ಪಟ್ಟಣದಲ್ಲಿ ದ್ವಿಪಥದ ಬೃಹತ್ ಸೇತುವೆ ಮತ್ತು ಬೈಪಾಸ್ ರಸ್ತೆ), ರಾ.ಹೆ.206ರಲ್ಲಿ ಸಾಗರ ನಗರ ವ್ಯಾಪ್ತಿಯಲ್ಲಿ 4 ಪಥದ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.
ಇದನ್ನೂ ಓದಿ: ಗುಣಮಟ್ಟದ ಶಿಕ್ಷಣಕ್ಕೆ ಹೇಳಿ ಮಾಡಿಸಿದ್ದಂತಿರುವ ಶಾಲೆ; ಸೀಟ್‌ಗಾಗಿ ಶಾಸಕರು, ಸಚಿವ ಕಡೆಯಿಂದಲೂ ಒತ್ತಡ..!
155 ಕೋಟಿ ರೂ.ಗಳ ವೆಚ್ಚದಲ್ಲಿ ಇರುವಕ್ಕಿಯಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಮೊದಲ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡದ ಉದ್ಘಾಟನೆಯನ್ನೂ ಸಿಎಂ ನೆರವೇರಿಸಲಿದ್ದಾರೆ. 850ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡಗಣಿ-ತಾಳಗುಂದ-ಹೊಸೂರು ಹೋಬಳಿಗಳ ಸುಮಾರು 255 ಕೆರೆಗಳಿಗೆ ನೀರು ತುಂಬುವ ಏತ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗಿನಿಂದಲೂ ಶಿವಮೊಗ್ಗ ಜಿಲ್ಲೆಗೆ ಭರಪೂರ ಯೋಜನೆಗಳು ಮಂಜೂರಾಗುತ್ತಲೇ ಇವೆ. ಈಗಾಗಲೇ ಶಿವಮೊಗ್ಗ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಹರಿದುಬಂದಿದ್ದು, ಶಿವಮೊಗ್ಗ ಜಿಲ್ಲೆ ಮಾದರಿ ಜಿಲ್ಲೆ ಎಂಬ ಖ್ಯಾತಿಗೆ ಒಳಗಾಗಿದೆ. ಇದೀಗ 1,700 ಕೋಟಿ ರೂಪಾಯಿ ಯೋಜನೆಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸುವ ಮೂಲಕ ತವರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆ.