ಶಿವಮೊಗ್ಗ: ಉಪ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದ್ದು, ಪಕ್ಷದ ಕಮಲ ಚಿಹ್ನೆಯಡಿ ಯಾರೇ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗೆ ಪಕ್ಷದಿಂದ ಎಲ್ಲ ತಯಾರಿ ಆಗಿದೆ. ಪಕ್ಷ ಬೂತ್ ಮಟ್ಟದಲ್ಲೂ ಸಹ ತಯಾರಿ ನಡೆಸಿದೆ. ಎಲ್ಲ ರೀತಿಯಿಂದಲೂ ಜನರು ನಮಗೆ ಮತ ನೀಡಲು ಬೆಂಬಲ ಕೊಡಲು ತಯಾರಿದ್ದಾರೆ. ಜನರ ಆರ್ಶಿವಾದದಿಂದ ಎರಡು ಕ್ಷೇತ್ರದಲ್ಲಿ ಖಂಡಿತ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಎಲ್ಲರಿಗೂ ಅವಕಾಶ ಸಿಗುತ್ತದೆ. ಎಲ್ಲರೂ ಪಕ್ಷದ ಕಾರ್ಯಕರ್ತರೇ ಎಂದು ವಿಜಯೇಂದ್ರ ಅವರಿಗೆ ಚುನಾವಣಾ ಉಸ್ತುವಾರಿ ನೀಡಿದ ಕುರಿತು ಪ್ರತಿಕ್ರಿಯಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ:
ಕಳೆದ ಐದು ವರ್ಷಗಳ ಕಾಲ ಸಮಯ ತೆಗೆದು ಕೊಂಡು ಬಹಳ ಸಮಾಲೋಚನೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಘೋಷಣೆ ಮಾಡಿ ಒಂದು ವರ್ಷವಾಗಿದೆ. ಅನುಷ್ಠಾನದಲ್ಲಿ ಯಾವುದೇ ಗೊಂದಲವಿಲ್ಲ. ನಿರಾಳವಾಗಿ ಉನ್ನತ ಶಿಕ್ಷಣದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಎಲ್ಲ ಸ್ವಾಯತ್ತ ವಿವಿಗಳು ಈ ದಿಕ್ಕಿನಲ್ಲಿ ತಯಾರಿ ಸಹ ಮಾಡಿಕೊಂಡಿವೆ. ಶಿವಮೊಗ್ಗದ ಕುವೆಂಪು ವಿ.ವಿ ಎಲ್ಲ ಬೋರ್ಡ್‌ನಲ್ಲೂ ಅನುಮೋದನೆ ಆಗಿದ್ದು, ಇದೇ ತಿಂಗಳ 18ರಿಂದ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.