ಶಿವಮೊಗ್ಗ: ನಗರದ ಗೋಪಾಳದ ಖಾಲಿ ಜಾಗದಲ್ಲಿ ಆಶ್ರಯ ನಿವೇಶನ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಸೀಗೆಹಟ್ಟಿಯಲ್ಲಿದ್ದ ಮಂಡಕ್ಕಿ, ಅವಲಕ್ಕಿ ಖಾದಿ ಗ್ರಾಮೋದ್ಯೋಗ ಕೈಗಾರಿಕ ಸಹಕಾರ ಸಂಘವು ನಗರಸಭೆಗೆ ಸಲ್ಲಿಸಿದ್ದ ಮನವಿ ಮೇರೆಗೆ ಗೋಪಾಳ ಗ್ರಾಮದ ಸ.ನಂ. 32/1 ರ 15 ಎಕರೆ 29 ಗುಂಟೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ನಿವೇಶನಗಳನ್ನು ನೀಡುವ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮತಿ ನೀಡಿದ್ದರು ಎಂದು ತಿಳಿಸಲಾಗಿದೆ. ಪ್ರಸ್ತಾವನೆಯಲ್ಲಿ ನಗರದ ಸೀಗೆಹಟ್ಟಿಯ ಮಂಡಕ್ಕಿ-ಅವಲಕ್ಕಿ ಕೈಗಾರಿಕೆಗಳ ಕಲ್ಮಶ ಮತ್ತು ಹೊಗೆಯಲ್ಲಿ ನಡೆಸುವುದನ್ನು ಗಮನಿಸಲಾಗಿತ್ತು. ಅಲ್ಲದೇ ತುಂಗಾ ನದಿ ಪ್ರವಾಹ ದಿಂದಾಗಿ ಉದ್ಯಮವು ಮುಳುಗಿ ಹೋಗುತ್ತಿತ್ತು ಹಾಗೂ ಉದ್ಯಮಗಳ ಕುಟುಂಬಗಳು ಪ್ರವಾಹ ದಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದವು.
ಇದಕ್ಕೆ ಪರ್ಯಾಯವಾಗಿ ಗೋಪಾಳದಲ್ಲಿ 12 ಉದ್ಯಮಿಗಳಿಗೆ 40*100 ಅಳತೆಗಳ ನಿವೇಶನ ಮತ್ತು 29 ಉದ್ಯಮಗಳಿಗೆ 40*120 ಅಳತೆಯ ನಿವೇಶನ ನೀಡಲು ಸರಕಾರದಿಂದ ಅನುಮೋದನೆ ನೀಡಲಾಗಿತ್ತು. ಉಳಿದ 9 ಎಕರೆ 29 ಗುಂಟೆ ಖಾಲಿ ಜಾಗವನ್ನು ಮೀಸಲಿಟ್ಟು ನಗರ ವ್ಯಾಪ್ತಿಯ ಮನೆ ಮತ್ತು ರಸ್ತೆಗಳಿಂದ ಸಂಗ್ರಹವಾಗುವ ಘನತ್ಯಾಜ್ಯ ಶೇಖರಣೆ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರಕಾರ ಆದೇಶ ಹೊರಡಿಸಿತ್ತು.
ಆದರೆ ನಿವೇಶನ ಮಂಜೂರಾಗಿ 39 ವರ್ಷ ಕಳೆದರೂ ಮಂಡಕ್ಕಿ-ಅವಲಕ್ಕಿ ಘಟಕಗಳನ್ನು ಆರಂಭಿಸಿಲ್ಲ. ಅಲ್ಲದೇ ಹಂಚಿಕೆದಾರರು ನಿವೇಶನದ ಮಂಜೂರಾತಿಯ ನಿಬಂಧನೆಗಳನ್ನು ಗಾಳಿಗೆ ತೂರಿ ಅಧಿಕ ಬೆಲೆಗೆ ಗಣ್ಯರಿಗೆ ಮಾರಾಟ ಮಾಡಿರುವುದು ಇತ್ತೀಚಿನ ದಾಖಲೆಗಳಿಂದ ತಿಳಿದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಬಹುಕೋಟಿ ನಗರಸಭೆ ಆಸ್ತಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೆಗೊಳ್ಳಬೇಕು. ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಬಡವರಿಗೆ ಮತ್ತು ನಿವೇಶನ ರಹಿತರಿಗೆ ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.