ಶಿವಮೊಗ್ಗ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕದ ಪಾಠ ಮಾಡಿದರೆ, ಮಕ್ಕಳ ಅಂಕದ ಪಟ್ಟಿ ಬೆಳೆಯುತ್ತದೆ. ಆದರೆ, ಅವರಿಗೆ ಪಠ್ಯೇತರ ಚಟುವಟಿಕೆ ನಡೆಸಿ, ಅವರಲ್ಲಿನ ಕಲೆಯನ್ನು ಹೊರತಂದರೆ ಅವರ ಮನೋ ವಿಕಾಸನವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗಾಜನೂರು ಆಗ್ರಹಾರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ರಾಜ್ಯಕ್ಕೆ ಮಾದರಿ ಕಾರ್ಯ ನಡೆಸಿದ್ದಾರೆ.
ಮಕ್ಕಳಿಗಾಗಿ ಚಿಣ್ಣರ ಚಿತ್ತಾರ ಮಾಸ ಪತ್ರಿಕೆ ಆರಂಭ: ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮಾಸ ಪತ್ರಿಕೆಗಳನ್ನು ಹೊರತರುವುದು ಸಾಮಾನ್ಯ. ಆದರೆ, ಗಾಜನೂರಿನ ಸರ್ಕಾರಿ ಶಾಲೆಯಲ್ಲಿ ಪ್ರತಿ ಮಾಸವು ಪತ್ರಿಕೆಯನ್ನು ಹೊರತರಲಾಗುತ್ತಿದೆ. ಮಕ್ಕಳ ಪಠ್ಯೇತರ ಚಟುವಟಿಕೆಯ ವೇದಿಕೆಯಾದ ಈ ಪತ್ರಿಕೆಗೆ, ಚಿಣ್ಣರ ಚಿತ್ತಾರ ಎಂದು ಹೆಸರಿಡಲಾಗಿದೆ. ಈ ಪತ್ರಿಕೆಯ ರೂವಾರಿಗಳು ಈ ಶಾಲೆಯ ಕನ್ನಡ ಶಿಕ್ಷಕ ಸೋಮಲಿಂಗಪ್ಪ. ಇವರು ಮಕ್ಕಳಲ್ಲಿನ ಪ್ರತಿಭೆ ಹೊರತರಬೇಕೆಂಬ ಉದ್ದೇಶದಿಂದ ಚಿಣ್ಣರ ಚಿತ್ತಾರ ಶಾಲಾ ಪತ್ರಿಕೆಯನ್ನು ಪ್ರಾರಂಭಿಸಿದರು. ಕಳೆದ ಎರಡು ವರ್ಷಗಳಿಂದ ಚಿಣ್ಣರ ಚಿತ್ತಾರ ಪತ್ರಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದರಲ್ಲಿ ಶಾಲೆಯ ಮಕ್ಕಳು ರಚನೆ ಮಾಡಿದ ಕವನ, ಚಿತ್ರಕಲೆ ಸೇರಿದಂತೆ ಇತರೆ ಚಟುವಟಿಕೆಯನ್ನು ಮುದ್ರಿಸಲಾಗುತ್ತದೆ. ಎಸ್ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರ: ಚಿಣ್ಣರ ಚಿತ್ತಾರ ಪತ್ರಿಕೆ ಪ್ರಾರಂಭ ಮಾಡಿದಾಗ ಶಿಕ್ಷಕ ಸೋಮಲಿಂಗಪ್ಪನವರು ಐದಾರು ಪ್ರತಿಗಳನ್ನು ಮುದ್ರಿಸಿ, ನೋಟಿಸ್ ಬೋರ್ಡ್ನಲ್ಲಿ ಅಂಟಿಸುತ್ತಿದ್ದರು. ಇದನ್ನು ನೋಡಿದ ಶಾಲಾ ಅಭಿವೃದ್ದಿ ಸಮಿತಿಯವರು ಶಾಲೆಯ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುವ ದೃಷ್ಟಿಯಿಂದ ಈ ಪತ್ರಿಕೆಯನ್ನು ಪ್ರತಿಮಾಸ ಹೊರ ತರುವಂತೆ ಸೋಮಲಿಂಗಪ್ಪನವರಿಗೆ ಸಲಹೆ ನೀಡಿದ್ದರು.
ಶಾಲೆಯಿಂದ ಮನೆ-ಮನೆಗೆ ತಲುಪಿದ ಪತ್ರಿಕೆ: ಚಿಣ್ಣರ ಚಿತ್ತಾರ ಪತ್ರಿಕೆಯು ಪ್ರಾರಂಭದಲ್ಲಿ ಕೇವಲ ಶಾಲೆಗೆ ಮಾತ್ರ ಸಿಮಿತವಾಗಿತ್ತು. ಈಗ ಇದು ಗ್ರಾಮದ ಪ್ರತಿ ಮನೆಗೂ ತಲುಪುತ್ತಿದೆ. ಶಿಕ್ಷಕ ಸೋಮಲಿಂಗಪ್ಪನವರ ಕಾರ್ಯವನ್ನು ಮೆಚ್ಚಿದ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ದಿ ಸಮಿತಿಯವರು, ಪ್ರತಿಮಾಸ ಪತ್ರಿಕೆ ಮುದ್ರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರಿಂದ ಈಗ ಪತ್ರಿಕೆ ಮನೆ-ಮನೆಗೂ ತಲುಪುತ್ತಿದೆ. ಮೊದಲು ಇದನ್ನು ವಿದ್ಯಾರ್ಥಿಗಳ ಹುಟ್ಟುಹಬ್ಬದ ಶುಭಾಷಯ ಕೋರಲು ಮಾಡಲಾಗಿತ್ತು. ನಂತರ ಇದರಲ್ಲಿ ವಿದ್ಯಾರ್ಥಿಗಳು ಬರೆದ ಚಿತ್ರಕಲೆ, ಕವನ, ಶಾಲಾ ವಾರ್ಷಿಕೋತ್ಸವದ ಪೋಟೋಗಳು, ಕ್ರೀಡೆಯಲ್ಲಿ ಭಾಗಿಯಾದವರ ಪೋಟೋಗಳನ್ನು ಸೇರಿದಂತೆ ಇತರೆ ಚಟುವಟಿಕೆಯನ್ನು ಮುದ್ರಿಸಲಾಗುತ್ತದೆ. ಶಿಕ್ಷಕರು ಕೂಡ ಲೇಖನಗಳನ್ನು ಬರೆಯುತ್ತಿರುತ್ತಾರೆ.
ಶಿಕ್ಷಕ ಸೋಮಲಿಂಗಪ್ಪನವರ ಈ ಕಾರ್ಯವನ್ನು ಮೆಚ್ಚಿ, ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಕೂಡ ನೀಡಲಾಗಿದೆ. ಇವರು ಪತ್ರಿಕೆ ಹೊರಡಿಸುವುದನ್ನು ನೋಡಿ ಇತರೆ ಶಾಲೆಯವರು ಸಹ ಮಾಸ ಪತ್ರಿಕೆ ಪ್ರಕಟಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಉತ್ಸುಕರಾಗಿ ಹೆಚ್ಚೆಚ್ಚು ಕವನ, ಚಿತ್ರಕಲೆಗಳನ್ನು ಬಿಡಿಸುತ್ತಿದ್ದು, ಸೋಮಲಿಂಗಪ್ಪನವರ ಕಾರ್ಯ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ..