ಮೈಸೂರು : ಜ.2ರಂದು ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿಯ ಮೃತ ದೇಹ ಹಳೇಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು.
ಈತನ ಸಹಪಾಠಿಗಳು ಮಹೇಶ್‌ನನ್ನು ಕೆರೆ ಬಳಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ವಾಮಾಚಾರ ಶಂಕೆ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಹಲವರ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಾಲಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ.
ಜ.2ರಂದು ಮಹೇಶ್ ಎಂಬ ಹುಡುಗನ ಮೃತದೇಹ ಹಳೇಪುರ ಕೆರೆಯಲ್ಲಿ ಪತ್ತೆಯಾಗಿದೆ. ವಾಮಾಚಾರಕ್ಕೆ ತಮ್ಮ ಮಗನನ್ನು ಬಲಿ ಕೊಡಲಾಗಿದೆ ಎಂದು ದೂರು ದಾಖಲಾಗಿದೆ. ಕವಲಂದೆ ಪೊಲೀಸರು ಹೆಮ್ಮರಗಾಲಕ್ಕೆ ತೆರಳಿ ಪರಿಶೀಲಿಸಿದ್ದಾರೆ ಎಂದರು.
ಇದನ್ನೂ ಓದಿ: SSLC ವಿದ್ಯಾರ್ಥಿ ಅನುಮಾನಾಸ್ಪದ ಸಾವು: 7 ಮಂದಿ ವಿರುದ್ಧ ಎಫ್ ಐಆರ್
ಮೃತಪಟ್ಟಿರುವ ಮಹೇಶ್ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಅನುಮಾನವಿದ್ದ ಕೆಲವರನ್ನು ವಶಕ್ಕೆ ಪಡೆದಿದ್ದೇವೆ. ಕೆರೆಯಲ್ಲಿ ವಾಮಾಚಾರಕ್ಕಾಗಿ ಬಳಸಿದ್ದ ಕರುಹುಗಳು ದೊರೆತಿವೆ. ಸ್ನೇಹಿತರ ಜೊತೆ ಮೃತ ಮಹೇಶ್ ಕೆರೆಯ ಬಳಿ ತೆರಳಿದ್ದ ಎಂದು ಹೇಳಲಾಗಿದೆ, ಇದರ ತನಿಖೆ ಚುರುಕುಗೊಂಡಿದೆ ಎಂದರು.
ಅಮಾವಾಸ್ಯೆ ಇದ್ದ ಹಿನ್ನೆಲೆ, ವಾಮಾಚಾರಕ್ಕಾಗಿ ಕೆರೆಯ ಬಳಿಗೆ ಮಹೇಶ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಆ ನಂತರ ಮಹೇಶ್‌ನನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಕೆರೆಯ ಬಳಿ ಸಿಕ್ಕಿರುವ ಕುರುಹುಗಳು, ಗ್ರಾಮದ ಜನರ ಮಾಹಿತಿಯಿಂದ ತನಿಖೆ ಆರಂಭಿಸಿದ್ದೇವೆ ಎಂದರು. ಇನ್ನೂ ಘಟನೆಗೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.