ಮೈಸೂರು: ವೇಲ್ ಬಿಗಿದುಕೊಂಡು ನವ ವಿವಾಹಿತೆ ಹಾಗೂ ಆಕೆಯ ಪ್ರಿಯಕರ ಕೆ.ಆರ್.ಸಾಗರ ನಾರ್ತ್ ಬ್ಲಾಕ್ ಬಳಿಯ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಟಗಳ್ಳಿಯ ಬಡವಾಣೆಯ ಹಳೆ ಪೊಲೀಸ್ ಠಾಣೆ ರಸ್ತೆಯ ನಿವಾಸಿಗಳಾದ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡವರು. ನಿಸರ್ಗ ಮದುವೆಯಾಗಿ 10 ದಿನಗಳಾಗಿತ್ತು. ಸಂಬಂಧಿಕರಾಗಿರುವ ನಿಸರ್ಗ ಮತ್ತು ನವೀನ್, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಸಂಬಂಧಿಕರಿಗೆ ವಿಷಯ ತಿಳಿಸಿರಲಿಲ್ಲ.
ಇದನ್ನೂ ಓದಿ: ಪಬ್ನಲ್ಲಿ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ
ನವೆಂಬರ್ 20 ರಂದು ಚಾಮರಾಜನಗರ ಸಮೀಪದ ಗ್ರಾಮದ ಯುವಕನಿಗೆ ನಿಸರ್ಗಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಡಿಸೆಂಬರ್ 1 ರ ಮಧ್ಯಾಹ್ನ ಮನೆಯಿಂದ ಇಬ್ಬರು ನಾಪತ್ತೆಯಾಗಿದ್ದರು. ಕೆಆರ್ಎಸ್ನ ನಾರ್ತ್ ಬ್ಯಾಂಕ್ನ ಮಿಲ್ಟ್ರಿ ಕ್ಯಾಂಪ್ ಬಳಿ ಸ್ಕೂಟರ್ ನಿಲ್ಲಿಸಿ, ಇಬ್ಬರು ವೇಲ್‌ನಿಂದ ಕಟ್ಟಿಕೊಂಡು ಹಿನ್ನಿರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಮಿಲ್ಟ್ರಿ ಕ್ಯಾಂಪ್ ಬಳಿ ವಾರಸುದಾರರಿಲ್ಲದೆ ಬೈಕ್ ನಿಂತಿದ್ದನ್ನು ನೋಡಿದ ಸ್ಥಳೀಯರು, ಕೆಆರ್‌ಎಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರೇಮಿಗಳ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.