ಮೈಸೂರು: ಕೆಲಸ ಕೊಡುವುದಾಗಿ ಆನ್ಲೈನ್ನಲ್ಲಿ ಜಾಹೀರಾತು ನೀಡಿ ಮೆಕಾನಿಕಲ್ ಇಂಜಿನಿಯರ್ನಿಂದ 48 ಲಕ್ಷ ರೂ.ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದರು.
ಪ್ರಕರಣದ ವಿವರ: ಮೈಸೂರಿನ ಹೊರ ಭಾಗದ ಸಾತಗಹಳ್ಳಿ ನಿವಾಸಿ ಮೆಕಾನಿಕಲ್ ಇಂಜಿನಿಯರ್ ಒರ್ವರು ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಇವರು ಕೆಲಸಕ್ಕಾಗಿ ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ, ಅವರಿಗೆ 'ಎಮಿನೆಂಟ್ ಮೈಂಡ್' ಎಂಬ ಹೆಸರಿನ ಕಂಪನಿಯ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿದ್ದಾರೆ.
ಕಂಪನಿಯವರು ಕೆಲಸಕ್ಕೆ ನೀವು ಆಯ್ಕೆಯಾಗಿದ್ದು, ಹಣ ಕಳುಹಿಸಿದರೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ನಂಬಿಸಿ ನವೆಂಬರ್ 5-2020ರಿಂದ ಏಪ್ರಿಲ್ 5-022ರವರೆಗೆ 48,80,200 ರೂ.ಗಳನ್ನು ಹಲವು ಕಂತುಗಳಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಯಾವುದೇ ಕೆಲಸ ಕೊಡಿಸದಿದ್ದಾಗ ಅನುಮಾನಗೊಂಡ ವ್ಯಕ್ತಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 7 ಕೀಪ್ಯಾಡ್ ಮೊಬೈಲ್, 4 ಸ್ಮಾರ್ಟ್ ಫೋನ್, 11 ಸಿಮ್ ಕಾರ್ಡ್, 2 ಲ್ಯಾಪ್ಟಾಪ್, 3 ನಕಲಿ ಸೀಲ್ ಹಾಗೂ 24 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಲ್ಲಿ ಓರ್ವ ಎಸ್ಎಸ್ಎಲ್ಸಿ ಓದಿದ್ದು, ಇನ್ನಿಬ್ಬರು ಡಿಪ್ಲೋಮಾ ಓದಿದ್ದಾರೆ. ಇವರು ಕೆಲಸ ಕೊಡಿಸುವುದಾಗಿ ಆನ್ಲೈನ್ ಮೂಲಕ ವಂಚಿಸುತ್ತಿದ್ದರು. ಈಗ ಒಂದು ಪ್ರಕರಣ ಪತ್ತೆಯಾಗಿದೆ. ವಿಚಾರಣೆಯಿಂದ ಮತ್ತಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದೆ. ಸದ್ಯ ತನಿಖೆ ಮುಂದುವರೆದಿದೆ. ಬಂಧಿತರಿಂದ ಮತ್ತಷ್ಟು ಮಾಹಿತಿ ಪಡೆಯುವ ಹಿನ್ನೆಲೆ ದೂರುದಾರರು ಹಾಗೂ ಬಂಧಿತರ ಹೆಸರನ್ನು ಬಹಿರಂಗ ಪಡಿಸಿಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೂಜುಕೋರರಿಂದ ನೆಲಮಂಗಲ ಇನ್ಸ್ಪೆಕ್ಟರ್ ಮೇಲೆ ಹಲ್ಲೆ