ಮೈಸೂರು: 'ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಳಗೆ ತೂರು' ಎಂಬ ಗಾದೆ ಮಾತನ್ನು 'ಅರಣ್ಯಾಧಿಕಾರಿಗಳು ಚಾಪೆ ಕೆಳಗೆ ತೂರಿದರೆ ಆನೆಗಳು ರಂಗೋಲಿ ಕೆಳಗೆ ತೂರುತ್ತಿವೆ' ಎಂದು ಹೇಳಿದರೂ ತಪ್ಪಾಗಲಾರದು.
ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ನುಗು ಕಿರು ಜಲಾಶಯ ಹಿನ್ನೀರಿನ ಪ್ರದೇಶವಿದೆ. ನೀರು ಕುಡಿಯಲು ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ಇಲ್ಲಿಗೆ ಬರುತ್ತವೆ. ಈ ಪ್ರದೇಶದಲ್ಲಿ ಬೀರುವಾಳು, ಹೆಡಿಯಾಲ, ಮೂಡಲಹುಂಡಿ, ಸಿದ್ದಯ್ಯನಹುಂಡಿ, ಹೊಸಬೀರುವಾಳು ಸೇರಿ ಹತ್ತಾರು ಗ್ರಾಮಗಳಿವೆ.
ನೀರು ಕುಡಿದ ಬಳಿಕ ಹಿನ್ನೀರಿನ ಪ್ರದೇಶದಿಂದ ಕಾಡಿಗೆ ಮರಳದೇ ಕೆಲವು ಆನೆಗಳು ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದವು. ಅದನ್ನು ತಡೆಯಲು ಈ ಪ್ರದೇಶದಲ್ಲಿ ಕಂಬಿ ಬೇಲಿ ಹಾಕಲಾಯಿತು. ಆದರೂ, ಆನೆಗಳು ಬೇಲಿ ಕಿತ್ತು ಹಾಕಿ ಗ್ರಾಮಗಳತ್ತ ಲಗ್ಗೆಯಿಟ್ಟು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರಿಂದ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಹಳ್ಳ (ಟ್ರಂಚ್) ತೋಡಿಸಲಾಯಿತು.
ಆದರೂ, ಅವುಗಳ ಉಪಟಳ ನಿಲ್ಲಲಿಲ್ಲ. ಹೇಗಾದರೂ ಮಾಡಿ ಅವುಗಳ ದಾಳಿ ನಿಲ್ಲಿಸಬೇಕು ಎಂದು ಟ್ರಂಚ್ ಪಕ್ಕದಲ್ಲೇ ಅರಣ್ಯ ಇಲಾಖೆ ಸೋಲಾರ್ ತಂತಿ ಅಳವಡಿಸಿದೆ. ಇದು ಕೊಂಚ ನೆಮ್ಮದಿ ತರಿಸಿದರೂ, ಸೋಲಾರ್ ತಂತಿಯನ್ನೂ ಕಿತ್ತು ಹಾಕಿ ದಾಳಿ ನಡೆಸುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಗ್ರಾಮಸ್ಥರು. ಹೀಗಾಗಿ, ಜನರು ಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ಆನೆಗಳು ಜಮೀನುಗಳತ್ತ ಲಗ್ಗೆ ಹಾಕದಂತೆ ಅರಣ್ಯಾಧಿಕಾರಿಗಳು ಹೊಸ ತಂತ್ರ ಯೋಜಿಸುತ್ತಿದ್ದರೆ, ಆನೆಗಳು ಕೂಡ ಪ್ರತಿತಂತ್ರ ರೂಪಿಸುತ್ತಿವೆ.