ಮೈಸೂರು: ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಅಧಿಕಾರಕ್ಕೆ ಬಂದರೂ, ಆಡಳಿತ ನಡೆಸುವಲ್ಲಿ ವಿಫಲತೆ ಕಂಡಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದ್ದಾರೆ.
ಕುವೆಂಪುನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಸಾಕಷ್ಟು ಕೆಲಸ ಮಾಡುವ ಅವಕಾಶವಿತ್ತು. ಆದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ದೂರಿದರು. ಚುನಾವಣೆ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಅಂತಾರೆ, ರೈತರಿಗೆ ೬ ಸಾವಿರ ರೂಪಾಯಿ ನೀಡಿದ್ದೇವೆ ಅಂತಾರೆ. ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಹಿಂದೆ ಇದಾರೆ ಎಂದು ಟೀಕಿಸಿದರು.
ಎರಡು ಬಾರಿ ಸಂಸದನಾಗಿಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯೂ ಮತದಾರರು ಕೈಹಿಡಿಯಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಪಕ್ಷದಿಂದ ಹೊರಬಂದು ನಾನು ಸ್ವಾಭಿಮಾನಿಯಾದೆ. ಆದರೆ 'ಸ್ವಾಭಿಮಾನಿ' ಎಂದು ಹೇಳಿಕೊಳ್ಳಲು ಕೆಲವರಿಗೆ ಅಧಿಕಾರ ಬೇಕು. ಸ್ವಾಭಿಮಾನ ಬೇಡವೆಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಕಾಳೆಲೆದರು.