ಮೈಸೂರು: ಇಲ್ಲಿನ ಪ್ರಖ್ಯಾತ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದ ಹೊರಾವರಣದಲ್ಲಿ ಪಂಚರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 6:40ರಿಂದ 7ರ ಶುಭಲಗ್ನದಲ್ಲಿ ಮೊದಲಿಗೆ ಯಾವುದೇ ವಿಘ್ನ ಎದುರಾಗದೆ ಇರಲೆಂದು ಗಣಪತಿ ರಥವನ್ನು ಎಳೆಯಲಾಯಿತು. ನಂತರ ಕ್ರಮವಾಗಿ ಶ್ರೀನಂಜುಂಡೇಶ್ವರ, ಪಾರ್ವತಿ ಅಮ್ಮನವರ, ಸುಬ್ರಹ್ಮಣ್ಯೇಶ್ವರ ಹಾಗೂ ಚಂಡೇಶ್ವರ ರಥವನ್ನು ಲಕ್ಷಾಂತರ ಭಕ್ತ ಸಮೂಹದ ನಡುವೆ ದೇವಸ್ಥಾನದ ಸುತ್ತ ಎಳೆಯಲಾಯಿತು.
ಯದುವಂಶಸ್ಥೆ ರಾಣಿ ಪ್ರಮೋದಾದೇವಿ ಒಡೆಯರ್ ಮೊದಲಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಂಚರಥೋತ್ಸವಕ್ಕೆ ದೇಶ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿ, ನಂಜುಂಡೇಶ್ವರ ಜಯ ಘೋಷಣೆಗಳನ್ನು ಕೂಗುತ್ತ ರಥವನ್ನು ಎಳೆದರು.
ಇನ್ನು ರಥ ಎಳೆಯಬೇಕಾದರೆ ಮೂರು ಬಾರಿ ಹಗ್ಗ ತುಂಡಾಗಿ ಶ್ರೀಕಂಠೇಶ್ವರ ರಥ ನಿಂತಿತು. ಈ ವೇಳೆ ರಥ ಎಳೆಯಲು ಅಡಚಣೆ ಉಂಟಾಗಿ ಕೂಡಲೇ ಎಚ್ಚೆತ್ತ ಸಿಬ್ಬಂದಿ ರಥದ ಹಗ್ಗವನ್ನು ಬದಲಾಯಿಸಿ ರಥೋತ್ಸವವನ್ನು ಸುಗಮಗೊಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಆಂಬುಲೆನ್ಸ್, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.