ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ 'ಉಪ'ಸಮರ ದಿನೇದಿನೆ ರಂಗೇರಿರುತ್ತಿದೆ. ಒಂದು ಕಡೆ ಮಾಜಿ ಸಚಿವ ಡಿ ಕೆ ಶಿವಕುಮಾರ್, ಮತ್ತೊಂದು ಕಡೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದ ಹೆಚ್.ವಿಶ್ವನಾಥ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಅಲ್ಲದೆ, ಪಕ್ಷದ ಹಿರಿಯ ನಾಯಕರೊಂದಿಗೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಪಕ್ಷ ತೊರೆದು ಈ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರೋದಾಗಿ ಹೇಳಿದ್ದಾರೆ.
ಹೀಗಾಗಿ, ವಿಶ್ವನಾಥ್ ಮಾತೃಪಕ್ಷವನ್ನೇ ತೊರೆದು ಹೋದ ಪರಿಣಾಮ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ದೇವೇಗೌಡರಿಗೆ ಎದುರಾಗಿದೆ. ಹಾಗೆಯೇ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ದೇವೇಗೌಡರು ಹಂದನಹಳ್ಳಿ, ಮನುಗನಹಳ್ಳಿ, ಕೆಂಪಮ್ಮನಹೊಸರು, ಬೂಚನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಮತಯಾಚಿಸಿದರು. ಪ್ರಚಾರದ ವೇಳೆ ಗೌಡರಿಗೆ ಮಹಿಳೆಯರು ದೃಷ್ಟಿ ತೆಗೆದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋತು ಮನೆಯಲ್ಲಿದ್ದ ವ್ಯಕ್ತಿಯನ್ನು ಕರೆದು ಶಾಸಕನನ್ನಾಗಿಸಿದೆ. ರಾಜ್ಯಾಧ್ಯಕ್ಷ ಪಟ್ಟ ಕೊಟ್ಟೆ. ಆದರೆ, ದೇವರ ಕೊಠಡಿಯಲ್ಲಿ ನನ್ನ ಫೋಟೋ ಇಟ್ಟು ಪೂಜೆ ಮಾಡುತ್ತೇನೆ ಎಂದು ಹೇಳಿದ ವ್ಯಕ್ತಿ ಮಾಡಿದ್ದೇ ಬೇರೆ ಎಂದು ಕುಟುಕಿದರು. ಇಂತಹ ವ್ಯಕ್ತಿಗೆ ಮತದಾರರು ಉತ್ತರ ಕೊಡಬೇಕಿದೆ. ಸಮಾನತೆಯಿಂದ ಕಂಡು ಬೆಳೆಸಿದ್ದೆ. ಬೆಳೆದ ನಂತರ ದ್ರೋಹ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.