ಮೈಸೂರು/ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಒಲಿದಿದೆ. ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಆಯುಕ್ತರ ಅಧಿಕೃತ ಘೋಷಣೆಯಾಗಿದ್ದು, ಮುಂದಿನ ಫೆಬ್ರವರಿ 23ರವರೆಗೆ ಸುನಂದಾ ಮೇಯರ್ ಸ್ಥಾನದಲ್ಲಿ ಇರುತ್ತಾರೆ.
ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಆಡಳಿತದಿಂದ ಬಿಜೆಪಿಗೆ ಮೇಯರ್ ಪಟ್ಟ ತಪ್ಪಿತ್ತು. ಅತೀ ಹೆಚ್ಚು ಸದಸ್ಯರು ಗೆದ್ದರೂ ಮೇಯರ್ ಸ್ಥಾನ ಸಿಕ್ಕಿರಲಿಲ್ಲ. ಆದರೆ, ನಾಲ್ಕೂವರೆ ತಿಂಗಳ ಅವಧಿಗೆ ಮೇಯರ್ ಸ್ಥಾನ ಬಿಜೆಪಿ ಪಡೆದಿದೆ. ಮುಂದಿನ ಎರಡು ಅವಧಿಗೂ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಬಿಜೆಪಿ ಒಪ್ಪಂದ ಮಾಡಿಕೊಂಡಿದೆ.
ಸಿಎಂ ಅಭಿನಂದನೆ: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಹಳ ವರ್ಷಗಳ ನಂತರ ಬಿಜೆಪಿಗೆ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದು, ನೂತನ ಮೇಯರ್ಗೆ ಶುಭ ಕೋರಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಬಹಳ ವರ್ಷದ ನಂತರ ಬಿಜೆಪಿಯವರು ಮೇಯರ್ ಆಗಿದ್ದಾರೆ. ಅಲ್ಲಿನ ಮುಖಂಡರಿಗೆ, ಕಾರ್ಪೊರೇಟರ್ಗಳಿಗೆ, ಉಸ್ತುವಾರಿ ಸಚಿವ ಸೋಮಶೇಖರ್, ಸಚಿವ ಆರ್.ಅಶೋಕ್, ಶಾಸಕ ರಾಮದಾಸ್ ಸೇರಿದಂತೆ ಜಿಲ್ಲೆಯ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಮಾಜಿ ಸಿಎಂ ಸಂತಸ: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಮೊದಲ ಬಾರಿ ಬಿಜೆಪಿಗೆ ಸಿಕ್ಕಿರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹರ್ಷಗೊಂಡಿದ್ದಾರೆ. ದೂರವಾಣಿ ಕರೆ ಮಾಡಿ ನೂತನ ಮೇಯರ್ ಗೆ ಶುಭ ಕೋರಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಗೂ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಬಾರಿ ಕೈತಪ್ಪಿದ್ದ ಅವಕಾಶ ಈ ಬಾರಿ ನಮಗೆ ಸಿಕ್ಕಿದೆ, ನಿಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ. ನಂತರ ನೂತನ ಮೇಯರ್ ಸುನಂದಾ ಪಾಲನೇತ್ರ ಅವರಿಗೂ ದೂರವಾಣಿ ಮೂಲಕ ಬಿಎಸ್ವೈ ಅಭಿನಂದನೆ ಸಲ್ಲಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮೊದಲ ಬಾರಿಗೆ ಬಿಜೆಪಿ ಪಡೆದುಕೊಂಡಿದ್ದು, ಇದು ಪಕ್ಷದ ಬೇರುಗಳು ವಿಸ್ತಾರಗೊಳ್ಳುತ್ತಿರುವ ಪ್ರಬಲ ಸಂಕೇತವಾಗಿದೆ. ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿರುವ ಪಕ್ಷದ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬಿಎಸ್ವೈ ಟ್ವೀಟ್ ಮಾಡಿದ್ದಾರೆ.