ಮೈಸೂರು: ಷಷ್ಠಿ ಹಬ್ಬದ ವರದಿ ಮಾಡಲು ತೆರಳಿದ್ದ ಸ್ಥಳೀಯ ಖಾಸಗಿ ವಾಹಿನಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲ್ಅನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದ ಎನ್.ಆರ್. ಠಾಣೆಯ ಕಾನ್ಸ್‌ಟೇಬಲ್ ಲೋಕೇಶ್ ಅಮಾನತುಗೊಂಡವರು. ಕರ್ತವ್ಯ ವೇಳೆ ದುರ್ನಡತೆ ಪ್ರದರ್ಶಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಅಮಾನತು ಮಾಡಲಾಗಿದೆ.
ಪ್ರಕರಣ ಹಿನ್ನೆಲೆ:
ಗುರುವಾರ ಬೆಳಗ್ಗೆ ಸಿದ್ದಲಿಂಗಪುರ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುತ್ತಿದ್ದ ಷಷ್ಠಿ ಪೂಜೆಯ ವರದಿ ಮಾಡಲು ತೆರಳಿದ್ದ ಸ್ಥಳೀಯ ಖಾಸಗಿ ವಾಹಿನಿಯ ಕ್ಯಾಮರಾಮ್ಯಾನ್ ಸತೀಶ್ ಅವರನ್ನು ದೇಗುಲದ ಹೊರಗೆ ಅಡ್ಡ ಹಾಕಿದ ನರಸಿಂಹರಾಜ (ಎನ್.ಆರ್) ಠಾಣೆಯ ಕಾನ್ಸ್‌ಟೇಬಲ್ ಲೋಕೇಶ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಲಾಠಿಯಿಂದ ಥಳಿಸಿ ನೆಲಕ್ಕೆ ಬೀಳಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗ್ತಿದೆ.
ಘಟನೆ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಲ್ಲದೇ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪೊಲೀಸ್ ಆಯುಕ್ತರನ್ನು ಒತ್ತಾಯಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದೇವೆ : ಸಿಎಂ ಬೊಮ್ಮಾಯಿ