ಮಂಗಳೂರು: ಸಾಮಾನ್ಯವಾಗಿ ಎಲ್ಲರೂ ತಮ್ಮ ಇಷ್ಟಾರ್ಥ ಈಡೇರಿದ ನಂತರ ಹರಕೆ ತೀರಿಸುತ್ತಾರೆ. ಆದರೆ ಇಲ್ಲೊಬ್ಬರು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಹೇಳಿಕೊಂಡ ಯಕ್ಷಗಾನ ಹರಕೆಯನ್ನು ತೀರಿಸಲು ಫಲಿತಾಂಶ ಬರುವ ಮುನ್ನವೆ ಯಕ್ಷಗಾನಕ್ಕೆ ಬುಕ್ಕಿಂಗ್ ಮಾಡಿದ್ದಾರೆ.
ಹೌದು... ನಗರದ ಟೀಂ ಮೋದಿ ಸದಸ್ಯರು, ಕಳೆದ ವರ್ಷ ಡಿ. 29 ರಂದು ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಆಯೋಜಿಸಿದ್ದ ಯಕ್ಷಗಾನದ ವೇಳೆ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಹರಕೆಯನ್ನು ಹೇಳಿಕೊಂಡಿದ್ದರು. ಇದೀಗ ಚುನಾಚಣಾ ಫಲಿತಾಂಶದ ಮರುದಿನವಾದ ಮೇ 24 ರಂದು ನಗರದ ರಥಬೀದಿಯಲ್ಲಿ ನಡೆಯುವ ಯಕ್ಷಗಾನಕ್ಕೆ ಬುಕ್ಕಿಂಗ್ ಮಾಡಿದ್ದು, ಯಕ್ಷಗಾನದ ಕರಪತ್ರವನ್ನು ಜಾಲತಾಣದಲ್ಲಿ ಸಹ ಹರಿಬಿಡುತ್ತಿದ್ದಾರೆ.
ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗೇ ಆಗುತ್ತಾರೆ ಎಂಬ ವಿಶ್ವಾಸದಲ್ಲಿ, ತಮ್ಮ ಇಷ್ಟಾರ್ಥ ನೆರವೇರಲಿದೆ ಎಂಬ ನಂಬಿಕೆಯಲ್ಲಿ ಫಲಿತಾಂಶ ಬರುವ ಮುಂಚೆಯೇ ಯಕ್ಷಗಾನ ಬುಕ್ಕಿಂಗ್ ಮಾಡಿರುವ ಟೀಂ ಮೋದಿ, ನರೇಂದ್ರ ಭಾರತದ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಮತ್ತು ತಾಯಿ ದುರ್ಗಾಪರಮೇಶ್ವರಿಗೆ ಕೃತಜ್ಞತೆ ಸಲ್ಲಿಸಲು ದೇಶಭಕ್ತರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿದ್ದಾರೆ.
![Yakshagana](https://etvbharatimages.akamaized.net/etvbharat/prod-images/3242685_dhfjh.jpg)
ಕಟೀಲು ಯಕ್ಷಗಾನ ತಿರುಗಾಟ ಮೇ 25 ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ಯಕ್ಷಗಾನಕ್ಕೆ ಆರೇಳು ತಿಂಗಳು ಕಾಯಬೇಕು. ಆ ಕಾರಣದಿಂದ ಫಲಿತಾಂಶದ ಮರುದಿನವೇ ಹರಕೆ ತೀರಿಸಲು ಟೀಂ ಮೋದಿ ಮುಂದಾಗಿದೆ.