ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಬಂದಿದ್ದಾರೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿ ಚೆನ್ನೈನ ಅರಿಗ್ನರ್ ಅಣ್ಣಾ ಮೃಗಾಲಯದಿಂದ ಕಾವೇರಿ ಹೆಸರಿನ ಒಂದು ಬಿಳಿ ಹೆಣ್ಣುಹುಲಿಯನ್ನು ನಿಸರ್ಗಧಾಮಕ್ಕೆ ತರಿಸಲಾಗಿದೆ. ಜೊತೆಗೆ, ಹೆಣ್ಣು ಉಷ್ಟ್ರಪಕ್ಷಿಯೂ ಬಂದಿದೆ.
ಇವುಗಳ ಜೊತೆಗೆ, ಪಿಲಿಕುಳ ಜೈವಿಕ ಉದ್ಯಾನವನದಿಂದ ಅರಿಗ್ನರ್ ಅಣ್ಣಾ ಮೃಗಾಲಯಕ್ಕೆ ಒಂದು ಬೆಂಗಾಲ್ ಹುಲಿ, ನಾಲ್ಕು ಕಾಡುನಾಯಿಗಳು ಹಾಗೂ ಹಾವುಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಸದ್ಯ ಬಿಳಿ ಹುಲಿಯನ್ನು ಕ್ವಾರೆಂಟೈನ್‌ನಲ್ಲಿ ಪ್ರತ್ಯೇಕಿಸಿಡಲಾಗಿದೆ. ಸ್ಥಳೀಯ ವಾತಾವರಣಕ್ಕೆ ಒಗ್ಗಿದ ಬಳಿಕವೇ ಸಾರ್ವಜನಿಕರ ವೀಕ್ಷಣೆಗೆ ಸಿಗಲಿದೆ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಗುಜರಾತ್‌ನ ರಾಜ್‌ಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಮತ್ತು ಹಲವು ಅಪರೂಪದ ಪಕ್ಷಿಗಳು ಮತ್ತು ಮಹಾರಾಷ್ಟ್ರದ ಗೋರೆವಾ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಹಾಗೂ ಕರಡಿಗಳು, ಒಡಿಶಾದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಹಾಗೂ ಪಕ್ಷಿಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ಪಿಲಿಕುಳಕ್ಕೆ ತರಿಸಿಕೊಳ್ಳಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ.ಭಂಡಾರಿ ತಿಳಿಸಿದರು.
ಇದನ್ನೂ ಓದಿ : ವಿಡಿಯೋ: ಹುಬ್ಬಳ್ಳಿಯಲ್ಲಿ ಬಿಸಿಲಿನ ತಾಪಕ್ಕೆ ಹೊತ್ತಿ ಉರಿದ ಕಾರು