ಸುಳ್ಯ, ದಕ್ಷಿಣ ಕನ್ನಡ: ಚಿಕ್ಕಮಗಳೂರಿನ ವಿಶೇಷ ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಪಂಜ ವಲಯ ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬೃಹತ್ ರಕ್ತ ಚಂದನ ಮಾರಾಟ ಜಾಲವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಾಳಿಲ ಗ್ರಾಮದ ನಿವಾಸಿಯೊಬ್ಬರು ಶೆಡ್‌ನಲ್ಲಿ, ಅಕ್ರಮವಾಗಿ ರಕ್ತ ಚಂದನದ ಮರಗಳನ್ನು ಕಡಿದು, ದಿಮ್ಮಿಗಳಾಗಿ ಪರಿವರ್ತಿಸಿ, ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರಕ್ತಚಂದನದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಅಬ್ದುಲ್ಲಾ (51) ಮತ್ತು ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಕೆ.ಹಮೀದ್ (47) ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 260 ಕೆಜಿ ತೂಕದ, 40 ರಕ್ತ ಚಂದನದ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಸಿಐಡಿ ಅರಣ್ಯ ಘಟಕದ ಐಜಿಪಿ ಶರತ್‌ಚಂದ್ರ , ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಎಂ.ಹೆಚ್.ಅಕ್ಷಯ್ ಮತ್ತು ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪಾಧೀಕ್ಷಕ ಎನ್.ಟಿ. ಶ್ರೀನಿವಾಸರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಸಬ್ ಇನ್ಸ್‌ಪೆಕ್ಟರ್ ಶ್ರೀಮತಿ ಆರ್ .ಶೋಭಾರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ಮಂಜೂರುಗೊಂಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪತಿ, ಪತ್ನಿ ಮತ್ತು ಆಕೆ.. ಠಾಣೆಯಲ್ಲಿದ್ದ ಗಂಡನ ನೋಡಲು ಬಂದ ಗೆಳತಿಗೆ ಪತ್ನಿ ಮಾಡಿದ್ದೇನು?