ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಕಲಿ ಮತದಾನ ಮಾಡಲು ಬಂದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ ಘಟನೆ ನಿನ್ನೆ ನಡೆದಿದೆ.
ಕಲ್ಲಡ್ಕದ ಗೋಳ್ತಮಜಲು ಗ್ರಾಮದ ಮಹಮ್ಮದ್ ಶಾಫಿ (23), ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ (19) ಹಾಗೂ ಅನ್ವರ್ (30) ದಸ್ತಗಿರಿಯಾದ ಆರೋಪಿಗಳು.
ಮೊದಲನೇ ಪ್ರಕರಣ:
ಮಂಗಳೂರು ಲೋಕಸಭಾ ಕ್ಷೇತ್ರದ 205ನೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 177ರಲ್ಲಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಹಮ್ಮದ್ ಶಾಫಿ ಎಂಬಾತನು ಮಜೀದ್ ರೆಹ್ಮಾನ್ ಎಂಬಾತನ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಆಧಾರ್ ಕಾರ್ಡ್ ಹಾಜರು ಪಡಿಸಿದ್ದಾನೆ. ಆದರೆ ಚುನಾವಣಾ ಏಜೆಂಟ್ ಈತನು ಮಜೀದ್ ರೆಹ್ಮಾನ್ ಅಲ್ಲ ಎಂದು ಹೇಳಿದ್ದು, ಈ ಸಂದರ್ಭ ವಿಚಾರಣೆ ಮಾಡಿದಾಗ ಈತ ಮತ್ತೊಬ್ಬನ ಹೆಸರಿನಲ್ಲಿ ಮತದಾನ ಮಾಡಲು ಬಂದಿದ್ದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.
2ನೇ ಪ್ರಕರಣ:
ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 123ರಲ್ಲಿ ನಿನ್ನೆ ಸಂಜೆ 5.55 ರ ಸುಮಾರಿಗೆ ಮತದಾರನೊಬ್ಬ ಮತ ಚಲಾಯಿಸಲು ಬಂದಾಗ ಆತನನ್ನು ನೋಡಿದ ಚುನಾವಣಾ ಏಜೆಂಟ್ ಈತನ ಹೆಸರು ಮೊಹಮ್ಮದ್ ಶಫಿಕ್ ಎಂಬುದಾಗಿ ತಿಳಿಸಿದ್ದಾರೆ. ಆ ವ್ಯಕ್ತಿಯ ಗುರುತಿನ ಚೀಟಿಯನ್ನು ನೋಡಲಾಗಿ ಅದರಲ್ಲಿ ಆಸಿಫ್ ಆಲಿ, ತಂದೆ ಹಂಝ ಎಂಬುದಾಗಿ ಇರುತ್ತದೆ. ಈತನನ್ನು ವಿಚಾರಿಸಿದ ಬಳಿಕ ಈತ ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ ಹಾಗೂ ಈತನನ್ನು ಇಮ್ರಾನ್ ಎಂಬಾತ ಕಳುಹಿಸಿರುವುದು ಎಂಬುದು ತಿಳಿದು ಬಂದಿದೆ. ಈತನನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
3ನೇ ಪ್ರಕರಣ:
ಮತ್ತೆ ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 122ರಲ್ಲಿ ಸಂಜೆ 5.45 ಗಂಟೆ ಸುಮಾರಿಗೆ ಅನ್ವರ್ ಎಂಬಾತ ಎರಡನೇ ಸಲ ಮತದಾನ ಮಾಡಲು ಬಂದಿದ್ದು, ಈಗಾಗಲೇ ಬೆಳಗ್ಗೆ 11 ಗಂಟೆಗೆ ಮತದಾನ ಮಾಡಿ ಹೋಗಿದ್ದಾನೆ. ಈ ವೇಳೆ ಆತ ಎಡಗೈ ತೋರು ಬೆರಳಿಗೆ ಶಾಹಿ ಹಾಕಿದ ಸ್ಥಳವನ್ನು ಗಾಯ ಮಾಡಿಕೊಂಡು ಬಂದಿರುವುದು ಕಂಡು ಬಂದಿತ್ತು. ಉದ್ದೇಶಪೂರ್ವಕವಾಗಿಯೇ ಈತ ಮತ್ತೊಮ್ಮೆ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವುದಾಗಿದೆ. ಹೀಗಾಗಿ ಈತನನ್ನೂ ದಸ್ತಗಿರಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.