ಪುತ್ತೂರು: ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದಿದ್ದಲ್ಲಿ ಸಮಾಜ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ನ್ಯಾಯಾಲಯದ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಮೂಲಭೂತ ವ್ಯವಸ್ಥೆಗಳೊಂದಿಗೆ ಹಲವಾರು ಕರ್ತವ್ಯಗಳನ್ನು ಪರಿಪಾಲನೆ ಮಾಡಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದರು.
ಮಂಗಳವಾರ ಪುತ್ತೂರು ನಗರದ ಆನೆಮಜಲು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಕಟ್ಟಡ, ಆನೆಮಜಲಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಕೀಲರ ಭವನದ ಉದ್ಘಾಟನೆ ಹಾಗೂ ದರ್ಬೆಯಲ್ಲಿ ನಿರ್ಮಾಣಗೊಳ್ಳಲಿರುವ ನ್ಯಾಯಾಧೀಶರ ವಸತಿ ಗೃಹಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ವ್ಯಾಜ್ಯ ಎಂಬುದು ಕ್ಯಾನ್ಸರ್ ರೋಗದಂತೆ. ವ್ಯಾಜ್ಯವಿರುವಲ್ಲಿ ಶಾಂತಿಯನ್ನು ಕಾಣಲು ಸಾಧ್ಯವಿಲ್ಲ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾಲಯದ ವ್ಯವಸ್ಥೆ ಅನಿವಾರ್ಯ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸುತ್ತಿದೆ ಎಂದರು. ಇದೇ ವೇಳೆ, ಹೆಣ್ಣು ಮಕ್ಕಳು ಇದೀಗ ವಕೀಲರಾಗಿ ಹೆಚ್ಚು ಕಂಡು ಬರುತ್ತಿದ್ದು, ಮಹಿಳಾ ವಕೀಲರಿಗಾಗಿ ಪೂರಕ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತವು ಜಗತ್ತಿಗೆ ನಾಗರೀಕತೆಯನ್ನು ಪರಿಚಯಿಸಿದ ದೇಶ. ಈ ಪರಂಪರೆಯನ್ನು ಮುಂದುವರಿಸುವ ಕೆಲಸವಾಗಬೇಕಾಗಿದೆ. ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯ ಸಂಕೀರ್ಣವು ಪುತ್ತೂರಿನ ಹಿರಿಮೆಗೊಂದು ಗರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಮತ್ತು ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಅನುಷ್ಠಾನ: ಸುಮ್ಮನೆ ತಿರುಗುವ ವಾಹನ ಸವಾರರಿಗೆ ಕಡಿವಾಣ