ಮಂಗಳೂರು: ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿರುವುದರಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ದರಿದ್ರ ಎಂದು ಕರೆದಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲವೆಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡಲು ವಿಫಲವಾಗಿದೆ. ಹಾಗಾಗಿ ಸಿದ್ದರಾಮಯ್ಯ ದರಿದ್ರ ಸರ್ಕಾರ ಎಂದದ್ದು ತಪ್ಪಲ್ಲ. ಪ್ರಾಕೃತಿಕ ವಿಕೋಪ 17 ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ಯಾವ ಜಿಲ್ಲೆಗೂ ಹಣ ಬಿಡುಗಡೆ ಆಗಿಲ್ಲ. ಪ್ರಕೃತಿ ವಿಕೋಪದಲ್ಲಿ ತೊಂದರೆಯಾದವರಿಗೆ ಸ್ಪಂದಿಸುವ ಕೆಲಸ ಆಗಿಲ್ಲ. ಪಶ್ಚಿಮ ವಾಹಿನಿ ಯೋಜನೆಗೆ ವಾರ್ಷಿಕವಾಗಿ ಬಿಡುಗಡೆಯಾಗಬೇಕಿದ್ದ ಹಣವೂ ಬಂದಿಲ್ಲ. ದ.ಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸೇರಿದಂತೆ ಅಂಬೇಡ್ಕರ್ ಭವನ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಖರ್ಗೆ ಅವರಿಗೆ ಟೀಕೆ ಮಾಡಿರುವುದಕ್ಕೆ ಕಟೀಲ್ ಹೆಸರೆತ್ತದೆ ರೈ ಆಕ್ರೋಶ ವ್ಯಕ್ತಪಡಿಸಿದರು. ಖರ್ಗೆ ಅವರು ರಾಜಕೀಯ ಮಾಡಿದಷ್ಟು ಅವರಿಗೆ ವಯಸ್ಸಾಗಿಲ್ಲ. ಅವರಿಗೆ ಅವರದೇ ಜಿಲ್ಲೆಯ ಹಿರಿಯ ದಲಿತ ಶಾಸಕನನ್ನು ಸಚಿವರಾಗಿ ಮಾಡುವ ಯೋಗ್ಯತೆ ಇಲ್ಲ. ಇಂತವರಿಗೆ ಖರ್ಗೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.