ಮಂಗಳೂರು: ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರ ಆರೋಗ್ಯದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
![Pinarayi Vijayan Take responsibility for people's health: Nalin Tong](https://etvbharatimages.akamaized.net/etvbharat/prod-images/kn-mng-06-nalin-kumar-twitter-script-ka10015_02042020223206_0204f_1585846926_673.jpg)
ಕಾಸರಗೋಡು ಗಡಿಯನ್ನ ದ.ಕ ಜಿಲ್ಲಾಡಳಿತ ತೆರವುಗೊಳಿಸಬೇಕೆಂದು ಪಿಣರಾಯಿ ವಿಜಯನ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಸರಗೋಡು ಗಡಿಯನ್ನು ಜಿಲ್ಲಾಡಳಿತ ತೆರೆಯಬೇಕೆಂದು ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ನಳಿನ್ ಕುಮಾರ್, ಪಿಣರಾಯಿ ವಿಜಯನ್ ಅವರನ್ನು ಲೇವಡಿ ಮಾಡಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಮಾನ್ಯ ಪಿಣರಾಯಿ ವಿಜಯನ್ ಅವರೇ, ನಿಮ್ಮ ಕೈಲಾಗದಿದ್ದಲ್ಲಿ ಒಪ್ಪಿಕೊಳ್ಳಿ. ನಮ್ಮ ಕಾಸರಗೋಡಿನ ಜನತೆಗೆ ಕೇಂದ್ರದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ್ ಅವರಲ್ಲಿ ಮಾತನಾಡಿ ಕಾಸರಗೋಡಿನಲ್ಲಿಯೇ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸುವಂತೆ ನಾನು ಮನವಿ ಮಾಡುವೆ.
![Pinarayi Vijayan Take responsibility for people's health: Nalin Tong](https://etvbharatimages.akamaized.net/etvbharat/prod-images/kn-mng-06-nalin-kumar-twitter-script-ka10015_02042020223206_0204f_1585846926_854.jpg)
ಅದು ಬಿಟ್ಟು ನಿಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಮಧ್ಯೆ ತಂದಿಡದಿರಿ. ಕಾಸರಗೋಡಿನ ಜನರು ಮತ್ತು ನಾವು ಯಾವಾಗಲೂ ಅನ್ಯೋನ್ಯತೆಯಿಂದ ಇದ್ದವರು. ಇಲ್ಲಿಯತನಕ ಶಿಕ್ಷಣ, ಆರೋಗ್ಯ ಸೌಲಭ್ಯಗಳಿಗೆ ತಡೆದವರಲ್ಲ. ಆದರೆ, ಇಂದಿನ ಪರಿಸ್ಥಿತಿ ಕಠಿಣವಾಗಿದೆ. ದಯವಿಟ್ಟು ಕಾಸರಗೋಡಿನ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಂದು ನಳಿನ್ ಕುಮಾರ್ ಟ್ವೀಟ್ ಮಾಡಿದ್ದಾರೆ.