ಪುತ್ತೂರು(ದಕ್ಷಿಣ ಕನ್ನಡ) : 40ಕ್ಕೂ ಅಧಿಕ ವರ್ಷಗಳಿಂದ ಪಾಳುಬಿದ್ದ ಸರ್ಕಾರಿ ಬಾವಿಯೊಂದು ಇದೀಗ ಬೆಳಕಿಗೆ ಬಂದಿದ್ದು, ಗಿಡ ಗಂಟಿಗಳಿಂದ ಮುಚ್ಚಿ ಹೋಗಿದ್ದ ಬಾವಿಗೆ ಕಾಯಕಲ್ಪ ಕೊಡಲು ಸ್ಥಳೀಯರು ಮುಂದಾಗಿದ್ದಾರೆ. ನಗರದ ದರ್ಬೆ-ಸುಬ್ರಹ್ಮಣ್ಯ ರಸ್ತೆಯ ಮುಖ್ಯ ರಸ್ತೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಈ ಬಾವಿ ಇದೆ. ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರದಿಂದ ನೂರು ಮೀಟರ್ ಮುಂದೆ ಸಾಗಿದರೆ ರಸ್ತೆಗೆ ತಾಗಿಕೊಂಡೇ ಈ ಬಾವಿ ಇದೆ.
ಮೂರು ಸೆಂಟ್ಸ್ ಜಾಗದಲ್ಲಿ ಈ ಬಾವಿಯೊಂದನ್ನು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಷ್ಟಕ್ಕೂ ಈ ಬಾವಿ ಇರುವ ಮೂರು ಸೆಂಟ್ಸ್ ಜಾಗವನ್ನು ಸ್ಥಳೀಯ ನಿವಾಸಿ ನಿವೃತ್ತ ಡೆಪ್ಯೂಟಿ ಜಿಲ್ಲಾ ಕಮಿಷನರ್ ಯು.ಕೆ. ನಾಯ್ಕ್ ಸರ್ಕಾರಕ್ಕೆ ಬರೆದುಕೊಟ್ಟಿರುವುದಾಗಿದೆ. ಈ ಕುರಿತು ದಾಖಲೆಯೂ ಅವರ ಬಳಿ ಇದೆ.
೪೦ ವರ್ಷಗಳ ಹಿಂದೆ ಬಾವಿಯಿದ್ದ ಈ ಜಾಗ ಸ್ವಚ್ಛವಾಗಿತ್ತು. ಆಗ ಇದ್ದ ಸುಮಾರು 10 ರಿಂದ 15 ಮನೆಯವರು ಈ ಬಾವಿಯ ನೀರನ್ನು ಬಳಸುತ್ತಿದ್ದರು. ಯಾವಾಗ ಪುರಸಭೆ ವತಿಯಿಂದ ಈ ಪರಿಸರಕ್ಕೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಯಿತೋ ಅಲ್ಲಿಂದ ಈ ಬಾವಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂತು. ಮುಂದಿನ ದಿನಗಳಲ್ಲಿ ಗಿಡಗಂಟಿಗಳಿಂದ ಮುಚ್ಚಲ್ಪಟ್ಟಿತು. ಸಾಲದಕ್ಕೆ ಅಂಗಡಿ ಮುಂಗಟ್ಟು, ಮನೆಗಳಿಂದ ತ್ಯಾಜ್ಯಗಳನ್ನು ಇದೇ ಜಾಗದಲ್ಲಿ ಬಿಸಾಡಲಾರಂಭಿಸಿದರು.
ಇತ್ತೀಚಿಗೆ ಸ್ಥಳೀಯರು ಸೇರಿಕೊಂಡು ಬಾವಿಯ ಸುತ್ತಲೂ ಇದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಬಾವಿಯನ್ನು ಅಭಿವೃದ್ಧಿಪಡಿಸುವಂತೆ ನಗರ ಆಡಳಿತದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದಿಸಿ ನಗರಾಡಳಿತ ಮೂರು ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಅನುದಾನ ಇಟ್ಟು ಬಾವಿಯ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಬಾವಿಯಿದ್ದ ಮೂರು ಸೆಂಟ್ಸ್ ಜಾಗವನ್ನು ಸಂಜೆ ಹೊತ್ತು ಸ್ಥಳೀಯರಿಗೆ ಕುಳಿತುಕೊಳ್ಳಲು ಸಣ್ಣ ಮಟ್ಟದ ಪಾರ್ಕ್ ಮಾಡಲು ಜೊತೆಗೆ ಬಾವಿಯ ಹೂಳೆತ್ತಿ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ನಗರಾಡಳಿತಕ್ಕೆ ಬೇಡಿಕೆ ಇಟ್ಟಿದ್ದಾರೆ.
ಓದಿ : ಉಚಿತ ಪಡಿತರ ಸೆಪ್ಟೆಂಬರ್ವರೆಗೆ ವಿಸ್ತರಣೆ.. ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ