ಮಂಗಳೂರು: ನಗರದಲ್ಲಿ ಆತಂಕ ಸೃಷ್ಟಿಸಿದ್ದ ಮಕ್ಕಳ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪದವಿನಂಗಡಿ ಮಹಾಲಸ ದೇವಸ್ಥಾನದ ಬಳಿ ಜನವರಿ 13ರಂದು ರಾತ್ರಿ ಏಳು ಗಂಟೆಗೆ ಬೈಕಿನಲ್ಲಿ ಬಂದ ಮೂವರು ಮಕ್ಕಳನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು ದೂರು ದಾಖಲಾಗಿತ್ತು. ಆರೋಪಿಗಳು ಮಕ್ಕಳ ಮೇಲೆ ಗೋಣಿಚೀಲವನ್ನು ಹಾಕಿ ಮಕ್ಕಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದರು ಎಂಬುದು ಆತಂಕ ಸೃಷ್ಟಿಸಿತ್ತು.
ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಿಡ್ನ್ಯಾಪ್ ಮಾಡಲು ಯತ್ನಿಸಿರುವುದು ಕಂಡು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಕಾವೂರಿನ ರಕ್ಷಕ್ ಶೆಟ್ಟಿ (22), ಬೋಂದೆಲ್ನ ಅಲಿಸ್ಟರ್ (21) ಮತ್ತು ಕಾವೂರಿನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳೆಂದು ತಿಳಿಸಿದರು.
ಬಂಧಿತ ಆರೋಪಿಗಳಲ್ಲಿ ರಾಹುಲ್ ಸಿನ್ಹ ಮತ್ತು ಅಲಿಸ್ಟರ್ ಹಿಂದೆ ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದರು. ರಕ್ಷಕ್ ಶೆಟ್ಟಿಯ ಮೇಲೆ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ಓದಿ...ಮಂಗಳೂರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನ : ಕಲ್ಲಲ್ಲಿ ಹೊಡೆದು ಓಡಿಸಿದ ಚಾಣಾಕ್ಷರು!
ಯೂಟ್ಯೂಬ್ ಫ್ರಾಂಕ್ ಮಾಡಲು ಈ ಕೃತ್ಯ: ಆರೋಪಿಗಳು ವಿಚಾರಣೆಯ ವೇಳೆ ತಾವು ಮಕ್ಕಳ ಕಿಡ್ನಾಪ್ ಮಾಡಲು ಯತ್ನಿಸಿರುವುದು ಯೂಟ್ಯೂಬ್ ಫ್ರಾಂಕ್ ಮಾಡಲು ಎಂದು ತಿಳಿಸಿದ್ದಾರೆ. ಬೈಕ್ನಲ್ಲಿ ಬಂದು ಗೋಣಿಚೀಲದಲ್ಲಿ ಮಕ್ಕಳನ್ನು ಅಪಹರಿಸುವ ಕೃತ್ಯದ ದೃಶ್ಯವನ್ನು ವಿಡಿಯೋ ಮಾಡಿ ಯೂಟ್ಯೂಬ್ಗೆ ಹಾಕಲು ಈ ಕೃತ್ಯ ಎಸಗಿರುವುದಾಗಿ ಅವರು ತಿಳಿಸಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.