ಬಂಟ್ವಾಳ (ದ.ಕ.): ಕೊರೊನಾ ಮಹಾಮಾರಿಯಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದು ದೇವಸ್ಥಾನಗಳ ಬಾಗಿಲನ್ನು ಮುಚ್ಚಲಾಗಿದೆ. ಇದರಿಂದ ದೇಗುಲದ ಅಕ್ಕಪಕ್ಕ ವಾಸಿಸುತ್ತಿದ್ದ ಪ್ರಾಣಿ ಪಕ್ಷಿಗಳಿಗೂ ಆಹಾರದ ಸಮಸ್ಯೆ ಕಾಡುತ್ತಿದೆ.
ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ಧಿಯಾಗಿದೆ. ಇಲ್ಲಿ ಬರುವ ಭಕ್ತರ ಹಣ್ಣು, ಕಾಯಿ, ಬಾಳೆಹಣ್ಣು, ತೆಂಗಿಕಾಯಿ ಈ ಕೋತಿಗಳಿಗೆ ಮೀಸಲು. ಒಮ್ಮೊಮ್ಮೆ ಮಕ್ಕಳು, ಮಹಿಳೆಯರ ಕೈಯಿಂದ ಬ್ಯಾಗ್ ಎಳೆದು ಆಹಾರಕ್ಕಾಗಿ ಕಾಡುವುದೂ ಉಂಟು. ಆದರೆ ಭಕ್ತರಿಲ್ಲದೆ ಹಿನ್ನೆಲೆ ಈ ಕೋತಿಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ.
ವಿಶೇಷ ಅಂದ್ರೆ ಗುಡ್ಡದ ಮೇಲಿರುವ ಶ್ರೀ ಕಾರಿಂಜೇಶ್ವರನ ನೈವೇದ್ಯ, ಶ್ರೀ ರಾಮನ ಭಕ್ತರಾದ ವಾನರರಿಗೆ ಅರ್ಪಿತವಾಗುತ್ತದೆ. ದೇವಾಲಯದ ಪ್ರಾಕಾರ ಗೋಡೆಯ ಬಳಿ ದೊಡ್ಡ ಕಲ್ಲು ಚಪ್ಪಡಿ ಇದ್ದು, ಇದು ವಾನರರ ನೈವೇದ್ಯದ ಸ್ಥಳ. ಪ್ರತಿ ಮಧ್ಯಾಹ್ನ ದೇವರಿಗೆ ಪೂಜೆಯಾದ ಬಳಿಕ ಮೂರು ಸೇರು ಅಕ್ಕಿಯ ನೈವೇದ್ಯವನ್ನು ಈ ಕಲ್ಲಿನ ಮೇಲೆ ವಾನರರಿಗೆ ಅರ್ಪಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಕೋತಿಗಳು ಆಗಮಿಸಿ ಆಹಾರ ಸೇವಿಸುತ್ತವೆ. ಜೊತೆಗೆ ದೇವಸ್ಥಾನದ ಮ್ಯಾನೇಜರ್ ಸತೀಶ್ ಪ್ರಭು ಅವರು ಸಹ ಸಂಜೆ ಹೊತ್ತು ಸ್ವಲ್ಪ ಆಹಾರ ಸಿದ್ದಪಡಿಸಿ ನೀಡುತ್ತಾರೆ.