ಮಂಗಳೂರು: ತನಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ನ್ಯಾಯವಾದಿಯ ಬಂಧನ ಇನ್ನೂ ಆಗಿಲ್ಲ. ಆರೋಪಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ಏಳು ದಿನಗಳು ಕಳೆದಿದರೂ ಆರೋಪಿಯ ಬಂಧನ ಇನ್ನೂ ಯಾಕಾಗಿಲ್ಲ ಎಂದು ಲೈಂಗಿಕ ಕಿರುಕುಳ ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ತನ್ನ ಬೆಂಬಲಕ್ಕೆ ನಿಂತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದೊಂದಿಗೆ ಬಾರ್ ಕೌನ್ಸಿಲ್ ಅಧ್ಯಕ್ಷರನ್ನು ಭೇಟಿಯಾಗಿ ತಮಗೆ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗ ತಾನೇ ಬಾರ್ ಕೌನ್ಸಿಲ್ ಅಧ್ಯಕ್ಷರನ್ನು ತಾನು ಭೇಟಿಯಾಗಿದ್ದೇನೆ. ಅವರು ತಮಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಇದೇ ರೀತಿ ಪೊಲೀಸರು ತಮಗೆ ಸಹಕಾರ ನೀಡಿ ಆರೋಪಿಯನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಹೇಳಿದರು.
ಓದಿ-ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ವಕೀಲ್ ರಾಜೇಶ್ ಭಟ್ ಬಾರ್ ಕೌನ್ಸಿಲ್ನಿಂದ ಅಮಾನತು
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮಾತನಾಡಿ, ಕಾನೂನು ವಿದ್ಯಾರ್ಥಿನಿ ಮೇಲೆ ನ್ಯಾಯವಾದಿಯೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ಏಳು ದಿವಸಗಳು ಕಳೆದರೂ ಇನ್ನೂ ಆರೋಪಿಯ ಬಂಧನವಾಗಿಲ್ಲ. ಮಂಗಳೂರು ನಗರ ಪೊಲೀಸ್ ಕಮಿಷನರ್ ಈ ಬಗ್ಗೆ ತನಿಖೆ ನಡೆಸಿದ್ದು, ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಮಾತ್ರ ಇನ್ನೂ ಕಂಡಿಲ್ಲ. ಇಂದು ಮತ್ತೆ ಆರೋಪಿ ಜಾಮೀನಿಗೆ ಪ್ರಯತ್ನ ಪಟ್ಟಿರುವುದಾಗಿ ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಸಂತ್ರಸ್ತೆ ಮುಂದೆ ಬಂದು ಆರೋಪಿಗೆ ಶಿಕ್ಷೆಯಾಗಬೇಕೆಂದು ಇಷ್ಟೆಲ್ಲ ಹೋರಾಟ ನಡೆಸುತ್ತಿದ್ದರೂ ಯಾವುದೇ ರೀತಿಯ ನ್ಯಾಯ ಇನ್ನೂ ದೊರಕಿಲ್ಲ. ಆತ ಜಾಮೀನಿಗೆ ಪ್ರಯತ್ನ ಮಾಡುತ್ತಿದ್ದರೂ, ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆಂದು ಪತ್ತೆಹಚ್ಚಲು ಇನ್ನೂ ಯಾಕೆ ಸಾಧ್ಯವಾಗಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಪೊಲೀಸರು ಈ ನ್ಯಾಯವಾದಿಯನ್ನು ಅರೆಸ್ಟ್ ಮಾಡಲು ಇನ್ನೂ ಯಾಕೆ ಸಾಧ್ಯವಾಗಿಲ್ಲ. ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದರೆ ಆತ ಅಜ್ಞಾತದಲ್ಲಿರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಿದೆಯಲ್ಲ. ಹಾಗಾದರೆ ಆತನು ಜಾಮೀನು ಪಡೆದುಕೊಳ್ಳಲು ಅವಕಾಶ ಮಾಡಲಾಗುತ್ತಿದೆಯೇ ಎಂದು ಅನುಮಾನ ಮೂಡುತ್ತಿದೆ ಎಂದು ಪ್ರಸನ್ನ ರವಿ ಹೇಳಿದರು.