ಮಂಗಳೂರು: ಮಗು ಹುಟ್ಟಿದ 10 ಗಂಟೆಯಲ್ಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ನವಜಾತ ಶಿಶುವನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆ ವೈದ್ಯರು ರಕ್ಷಿಸಿದ್ದಾರೆ.
ಮಗುವಿಗೆ ಹೃದಯದ ಸಮಸ್ಯೆ ಇದೆ ಎಂದು ತಾಯಿ ಗರ್ಭಿಣಿಯಾಗಿದ್ದ ವೇಳೆ ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿತ್ತು. ಈ ಕಾರಣದಿಂದಾಗಿ ಮಂಗಳೂರಿನ ದಂಪತಿ ಇಂಡಿಯಾನ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದರು. ಆಸ್ಪತ್ರೆಯಲ್ಲಿ ಮಹಿಳೆಗೆ ಸಹಜ ಹೆರಿಗೆ ಆಗಿದ್ದು ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ವೈದ್ಯರು, ಮಗು ಹುಟ್ಟಿದ 10 ಗಂಟೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮಗುವಿನ ಹೃದಯದ ವಾಲ್ವ್ ಕಿರಿದಾಗಿತ್ತು. ಒಂದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕೊನೆಗೂ ಸಮಸ್ಯೆ ಬಗೆಹರಿದಿದೆ. ಇದು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಾಗಿದ್ದು, ಶಿಶು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆಯಿತ್ತು. ಆದರೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ನುರಿತ ವೈದ್ಯರು ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿ ಮಗುವಿನ ಪ್ರಾಣ ಉಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಹತ್ತು ದಿನ ಕಳೆದಿದ್ದು, ಮಗು ಆರೋಗ್ಯವಾಗಿದೆ.
ಜನಿಸಿ ಒಂದು ದಿನವೂ ಆಗದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಕಠಿಣವಾಗಿದ್ದು, ಇದನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆ ವೈದ್ಯರು ಮಾಡಿ ತೋರಿಸಿದ್ದಾರೆ. ಇದಕ್ಕೆ ಮಗುವಿನ ಪೋಷಕರು ಸಂತೋಷ ವ್ಯಕ್ತಪಡಿಸಿದ್ದು, ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.