ಪುತ್ತೂರು: ಕೋವಿಡ್ ನಿಂದ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯಸಂಸ್ಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಸಂಜೀವ ಮಠಂದೂರು ಪಾಲ್ಗೊಂಡು, ಮೃತ ಮಹಿಳೆಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಚಿಕ್ಕ ಪುತ್ತೂರು ನಿವಾಸಿ ಕಾಂಚನ ಎಂಬುವರು ಜೂನ್ 14 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಲಿಯಾಗಿದ್ದು, ಕುಟುಂಬ ವರ್ಗದ ಕೋರಿಕೆಯ ಹಿನ್ನೆಲೆ ಮೃತಪಟ್ಟ ಮಹಿಳೆಯ ಶವ ಸಂಸ್ಕಾರವನ್ನು ಪುತ್ತೂರಿನ ಮಡಿವಾಳ ಕಟ್ಟೆ ರುದ್ರಭೂಮಿಯಲ್ಲಿ ನೆರವೇರಿಲಾಯಿತು.
ಮಹಿಳೆ ನಿಧನ ಹೊಂದಿದ ಮಾಹಿತಿ ಪಡೆದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಹಿಳೆಯ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಾರೆ. ಪಿಪಿಇ ಕಿಟ್ ಧರಿಸಿ, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಶಾಸಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಪಡೆಯಲೂ ಹಿಂಜರಿಯುತ್ತಿದ್ದ ಸಾಕಷ್ಟು ಘಟನೆಗಳು ರಾಜ್ಯ ಹಾಗೂ ದೇಶದಲ್ಲಿ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ಜೆಸಿಬಿಯಲ್ಲೋ, ಇತರ ಕಸ ಸಾಗಿಸುವ ವಾಹನದಲ್ಲೂ ಸಾಗಿಸಿ, ಹೂಳುವ ವ್ಯವಸ್ಥೆಯು ಈ ಹಿಂದೆ ನಡೆದಿತ್ತು. ಆ ಬಳಿಕದ ದಿನಗಳಲ್ಲಿ ಸರ್ಕಾರ ಕೋವಿಡ್ ನಿಂದ ಸಾವಿಗೀಡಾದ ವ್ಯಕ್ತಿಯ ಶವಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸುವ ನಿಟ್ಟಿನಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ಈ ವೇಳೆ ಸರ್ಕಾರದ ನಿಯಮಗಳನ್ನು ಜನರಿಗೆ ತಿಳಿಸಿದರು.
ಇನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಹಿಳೆಯ ಮೃತದೇಹವನ್ನು ಪುತ್ತೂರಿಗೆ ತರಲು ಸೇವಾಭಾರತಿ ಸ್ವಯಂಸೇವಕರು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಈಗಾಗಲೇ 248ಕ್ಕೂ ಹೆಚ್ಚು ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಗಳ ಶವಸಂಸ್ಕಾರವನ್ನು ನಡೆಸಿರುವ ದಕ್ಷಿಣ ಕನ್ನಡದ ಸೇವಾಭಾರತಿ ಘಟಕ ಪುತ್ತೂರಿನ ಕಾಂಚನ ಅವರ ಶವಸಂಸ್ಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿತ್ತು.